×
Ad

ವೃತ್ತಿಜೀವನದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ರನ್ ನೀಡಿದ ಬುಮ್ರಾ

Update: 2025-07-26 21:10 IST

ಜಸ್‌ಪ್ರಿತ್ ಬುಮ್ರಾ | PC : PTI 

ಮ್ಯಾಂಚೆಸ್ಟರ್, ಜು.26: ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ತನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಇನಿಂಗ್ಸ್‌ ವೊಂದರಲ್ಲಿ 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಅನಪೇಕ್ಷಿತ ದಾಖಲೆ ನಿರ್ಮಿಸಿದರು.

ಬುಮ್ರಾ 33 ಓವರ್‌ ಗಳಲ್ಲಿ 5 ಮೇಡನ್ ಸಹಿತ 112 ರನ್ ನೀಡಿ 2 ವಿಕೆಟ್‌ ಗಳನ್ನು ಪಡೆದಿದ್ದಾರೆ. ಬುಮ್ರಾ ಆಸ್ಟ್ರೇಲಿಯ ತಂಡದ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಮಾಡಿದ್ದರು. ಆಗ ಅವರು 28.4 ಓವರ್‌ ಗಳಲ್ಲಿ 99 ರನ್ ನೀಡಿ 4 ವಿಕೆಟ್‌ ಗಳನ್ನು ಉರುಳಿಸಿದ್ದರು.

ಬುಮ್ರಾ ಅವರು ಒಂದೇ ಟೆಸ್ಟ್ ಇನಿಂಗ್ಸ್‌ ನಲ್ಲಿ ಎರಡನೇ ಬಾರಿ 30ಕ್ಕೂ ಅಧಿಕ ಓವರ್ ಬೌಲಿಂಗ್ ಮಾಡಿದ್ದಾರೆ. 2021ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಬುಮ್ರಾ ಅವರು 36 ಓವರ್‌ ಗಳನ್ನು ಬೌಲಿಂಗ್ ಮಾಡಿದ್ದರು.

ಬುಮ್ರಾ ಅವರ ಬೌಲಿಂಗ್ ವೇಗದಲ್ಲಿ ಇಳಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಓಲ್ಡ್ ಟ್ರಾಫರ್ಡ್‌ ನಲ್ಲಿ 173 ಎಸೆತಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಸರಣಿಯ ಹಿಂದಿನ ಟೆಸ್ಟ್ ಪಂದ್ಯಗಳಿಗೆ ಹೋಲಿಸಿದರೆ ವೇಗದಲ್ಲಿ ಗಣನೀಯ ಇಳಿಕೆಯಾಗಿದೆ.

3ನೇ ದಿನದಾಟದಲ್ಲಿ ಬುಮ್ರಾ 2ನೇ ಹೊಸ ಚೆಂಡಿನಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿ ಮೈದಾನವನ್ನು ತೊರೆದಿದ್ದರು. ಆಗ ಅವರಿಗೆ ಪಾದದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ದಿನದಾಟದಂತ್ಯಕ್ಕೆ ಬುಮ್ರಾ ಮೈದಾನಕ್ಕೆ ವಾಪಸಾಗಿದ್ದು, ಜೆಮೀ ಸ್ಮಿತ್ ವಿಕೆಟನ್ನು ಪಡೆದಿದ್ದರು. ಆದರೆ ಅವರು ತನ್ನ ಎಂದಿನ ಲಯವನ್ನು ಕಳೆದುಕೊಂಡಂತೆ ಕಂಡುಬಂದರು.

ಬುಮ್ರಾ ಸರಣಿಯಲ್ಲಿ ಈ ತನಕ 14 ವಿಕೆಟ್‌ ಗಳನ್ನು ಉರುಳಿಸಿದ್ದರೂ ಅವರ ಬೌಲಿಂಗ್‌ ನಲ್ಲಿ ವೇಗ ಹಾಗೂ ಚುರುಕುತನದಲ್ಲಿನ ಇತ್ತೀಚೆಗಿನ ಕುಸಿತವು ಅವರ ಫಿಟ್ನೆಸ್ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News