×
Ad

ಸ್ವದೇಶದಲ್ಲಿ ವೇಗವಾಗಿ 50 ಟೆಸ್ಟ್ ವಿಕೆಟ್ : ದಾಖಲೆ ನಿರ್ಮಿಸಿದ ಬುಮ್ರಾ

Update: 2025-10-02 19:48 IST

 ಜಸ್‌ಪ್ರಿತ್ ಬುಮ್ರಾ | Photo Credit : PTI 

ಹೊಸದಿಲ್ಲಿ,ಅ.2: ಸ್ವದೇಶದಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಭಾರತೀಯ ಬೌಲರ್ ಎನಿಸಿಕೊಂಡಿರುವ ವೇಗಿ ಜಸ್‌ಪ್ರಿತ್ ಬುಮ್ರಾ ಗುರುವಾರ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾರೆ.

ಅಹ್ಮದಾಬಾದ್‌ನಲ್ಲಿ ಗುರುವಾರ ಆರಂಭವಾಗಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕೇವಲ 1,747 ಎಸೆತಗಳಲ್ಲಿ ಬುಮ್ರಾ ಈ ಸಾಧನೆ ಮಾಡಿದ್ದಾರೆ.

ಭಾರತ ತಂಡವು ವೆಸ್ಟ್‌ಇಂಡೀಸ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 162 ರನ್‌ಗೆ ಆಲೌಟ್ ಮಾಡಿದ್ದು, ಬುಮ್ರಾ 42 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದಾರೆ. ಬುಮ್ರಾ ಅವರು ಅಗ್ರ ಸ್ಕೋರರ್ ಜಸ್ಟಿನ್ ಗ್ರೀವ್ಸ್(32 ರನ್), ಆರಂಭಿಕ ಆಟಗಾರ ಕ್ಯಾಂಪ್‌ಬೆಲ್ ವಿಕೆಟ್‌ಗಳನ್ನು ಉರುಳಿಸಿದರು.

ಸ್ವದೇಶಿ ನೆಲದಲ್ಲಿ ಇನಿಂಗ್ಸ್ ಲೆಕ್ಕಾಚಾರದಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಬೌಲರ್‌ಗಳ ಪೈಕಿ ಬುಮ್ರಾ ಅವರು ಜಾವಗಲ್ ಶ್ರೀನಾಥ್ ಅವರ ದಾಖಲೆ(24 ಇನಿಂಗ್ಸ್)ಯನ್ನು ಸರಿಗಟ್ಟಿದರು. ಈ ಇಬ್ಬರು ದಾಖಲೆಯನ್ನು ಹಂಚಿಕೊಂಡಿದ್ದು, ಕಪಿಲ್ ದೇವ್(25 ಇನಿಂಗ್ಸ್)ಗಿಂತ ಮುಂದಿದ್ದಾರೆ. ಇಶಾಂತ್ ಶರ್ಮಾ ಹಾಗೂ ಮುಹಮ್ಮದ್ ಶಮಿ ತಲಾ 27 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಮುಹಮ್ಮದ್ ಸಿರಾಜ್ 40 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದ್ದು, ಈ ವರ್ಷ ಒಟ್ಟು 40ನೇ ವಿಕೆಟ್‌ಗಳನ್ನು ಪಡೆದಿದ್ದಾರೆ. ಕುಲದೀಪ ಯಾದವ್ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

► ಸ್ವದೇಶದಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಭಾರತೀಯ ವೇಗಿಗಳು(ಇನಿಂಗ್ಸ್‌ಗಳಲ್ಲಿ)

ಜಸ್‌ಪ್ರಿತ್ ಬುಮ್ರಾ-24

ಜಾವಗಲ್ ಶ್ರೀನಾಥ್-24

ಕಪಿಲ್ ದೇವ್-25

ಇಶಾಂತ್ ಶರ್ಮಾ-27

ಮುಹಮ್ಮದ್ ಶಮಿ-27

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News