×
Ad

ಭಾರತ-ಇಂಗ್ಲೆಂಡ್ ನಡುವಿನ ಮೂರನೆ ಏಕದಿನ ಪಂದ್ಯದ ವೇಳೆ ನಿದ್ರೆಗೆ ಜಾರಿದ ಜೋಫ್ರಾ ಆರ್ಚರ್; ವಿಡಿಯೊ ವೈರಲ್!

Update: 2025-02-14 13:00 IST

Screengrab: X

ಹೊಸದಿಲ್ಲಿ: ಫೆಬ್ರವರಿ 12ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಆಟಗಾರರ ಡಗೌಟ್ ನಲ್ಲಿ ನಿದ್ರೆಗೆ ಜಾರಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಇಂಗ್ಲೆಂಡ್ ತಂಡದ ಇನಿಂಗ್ಸ್ ನ 25ನೇ ಓವರ್ ವೇಳೆ ನಡೆದಿದೆ.

ಭಾರತ ನೀಡಿದ್ದ 357 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಇಂಗ್ಲೆಂಡ್ ತಂಡ ಬೆನ್ನಟ್ಟಿತ್ತು. ಈ ಸಂದರ್ಭದಲ್ಲಿ ಹ್ಯಾರಿ ಬ್ರೂಕ್ ಹಾಗೂ ಲಿಯಾಮ್ ಲಿವಿಂಗ್ಸ್ಟನ್ ಕ್ರೀಸಿನಲ್ಲಿದ್ದರು. ಈ ವೇಳೆ ಜೋಫ್ರಾ ಆರ್ಚರ್ ಆಟಗಾರರ ಡಗೌಟ್ ನಲ್ಲಿ ನಿದ್ರೆಗೆ ಜಾರಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯದ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, “ನಿದ್ದೆ ಮಾಡಲು ಒಳ್ಳೆಯ ಸಮಯ” ಎಂದು ವ್ಯಂಗ್ಯವಾಡಿದ್ದಾರೆ.

ಭಾರತ ತಂಡದ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ನಾಲ್ಕು ಪಂದ್ಯಗಳು ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಆಡಿದ್ದ ಜೋಫ್ರಾ ಆರ್ಚರ್, ಒಟ್ಟಾರೆ ಏಳು ವಿಕೆಟ್ ಗಳನ್ನು ಪಡೆಯಲು ಮಾತ್ರ ಸಫಲರಾಗಿದ್ದರು.

ಟಿ-20 ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಸರಣಿಗಳೆರಡರಲ್ಲೂ ಮೇಲುಗೈ ಸಾಧಿಸಿದ್ದ ಭಾರತ ತಂಡ, ಕ್ರಮವಾಗಿ 4-1, 3-0 ಅಂತರದಲ್ಲಿ ಎರಡೂ ಸರಣಿಗಳನ್ನು ಕೈವಶ ಮಾಡಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News