ಟೆಸ್ಟ್ ಇತಿಹಾಸದಲ್ಲಿ 2ನೇ ಕನಿಷ್ಠ ಮೊತ್ತಕ್ಕೆ ಆಲೌಟಾದ ಕೆರಿಬಿಯನ್ ಪಡೆ
PC : PTI
ಜಮೈಕಾ: ಟೆಸ್ಟ್ ಇತಿಹಾಸದಲ್ಲಿ ವೇಗವಾಗಿ ಐದು ವಿಕೆಟ್ ಗೊಂಚಲು ಕಬಳಿಸಿದ ಮಿಚೆಲ್ ಸ್ಟಾರ್ಕ್ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಸೋಮವಾರ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 176 ರನ್ ಅಂತರದಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 204 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡವು ತನ್ನ 2ನೇ ಇನಿಂಗ್ಸ್ ನಲ್ಲಿ ಕೇವಲ 27 ರನ್ ಗೆ ಆಲೌಟಾಯಿತು. ಟೆಸ್ಟ್ ಇತಿಹಾಸದಲ್ಲಿ ಎರಡನೇ ಕನಿಷ್ಠ ಮೊತ್ತ ಗಳಿಸಿತು. ಈ ಹಿಂದೆ 1955ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನ್ಯೂಝಿಲ್ಯಾಂಡ್ ತಂಡವು 26 ರನ್ ಗಳಿಸಿ ಆಲೌಟಾಗಿ ಅತ್ಯಂತ ಕನಿಷ್ಠ ಮೊತ್ತ ಗಳಿಸಿತ್ತು.
24 ಎಸೆತಗಳಲ್ಲಿ 11 ರನ್ ಗಳಿಸಿದ ಜಸ್ಟಿನ್ ಗ್ರೀವ್ಸ್ ಆತಿಥೇಯರ ಪರ ಗರಿಷ್ಠ ಸ್ಕೋರ್ ಗಳಿಸಿದರು. ಅಗ್ರ ಸರದಿಯ ನಾಲ್ವರು ಸೇರಿದಂತೆ ಒಟ್ಟು 7 ಆಟಗಾರರು ಶೂನ್ಯ ಸಂಪಾದಿಸಿದರು. ಟೆಸ್ಟ್ ಇನಿಂಗ್ಸ್ ನಲ್ಲಿ ಇದೇ ಮೊದಲ ಬಾರಿ 7 ಬ್ಯಾಟರ್ ಗಳು ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ 9 ಬಾರಿ 6 ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದರು.
ಮಿಚೆಲ್ ಸ್ಟಾರ್ಕ್(6-9)ಹಾಗೂ ‘ಹ್ಯಾಟ್ರಿಕ್ ವೀರ’ಬೋಲ್ಯಾಂಡ್(3-2) ದಾಳಿಗೆ ತರಗಲೆಯಂತೆ ಉದುರಿದ ವಿಂಡೀಸ್ ಕೇವಲ 14.3 ಓವರ್ ಗಳಲ್ಲಿ ಗಂಟುಮೂಟೆ ಕಟ್ಟಿತು. ಟೆಸ್ಟ್ ಕ್ರಿಕೆಟ್ ನಲ್ಲಿ 3ನೇ ಬಾರಿ ತಂಡವೊಂದು ಕಡಿಮೆ ಓವರ್ ನಲ್ಲಿ ಆಲೌಟಾಗಿದೆ. ದಕ್ಷಿಣ ಆಫ್ರಿಕ ತಂಡವು 1924ರಲ್ಲಿ ಇಂಗ್ಲೆಂಡ್ ವಿರುದ್ಧ 12.3 ಓವರ್ ಗಳಲ್ಲಿ ಹಾಗೂ ಕಳೆದ ವರ್ಷ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 13.5 ಓವರ್ ಗಳಲ್ಲಿ ಆಲೌಟಾಗಿತ್ತು.
ವಿಂಡೀಸ್ ನ ಅಗ್ರ ಸರದಿಯ ಆರು ಬ್ಯಾಟರ್ ಗಳು ಆರು ರನ್ ಗಳಿಸಿ ಔಟಾದರು. ಪುರುಷರ ಟೆಸ್ಟ್ ಕ್ರಿಕೆಟ್ ಇನಿಂಗ್ಸ್ ನಲ್ಲಿ ತಂಡವೊಂದರ ಅಗ್ರ-6 ಆಟಗಾರರು ಗಳಿಸಿದ ಕನಿಷ್ಠ ಸ್ಕೋರಾಗಿದೆ.
ಕೇವಲ 15 ಎಸೆತಗಳಲ್ಲಿ ಐದು ವಿಕೆಟ್ ಗೊಂಚಲು ಪಡೆದ ಸ್ಟಾರ್ಕ್ ಅವರು ಎರ್ನಿ ಟೋಶಕ್(1947ರಲ್ಲಿ ಭಾರತ ವಿರುದ್ಧ), ಸ್ಟುವರ್ಟ್ ಬ್ರಾಡ್(2015ರಲ್ಲಿ ಆಸ್ಟ್ರೇಲಿಯ ವಿರುದ್ಧ) ಹಾಗೂ ಸ್ಕಾಟ್ ಬೋಲ್ಯಾಂಡ್(2021ರಲ್ಲಿ ಇಂಗ್ಲೆಂಡ್ ವಿರುದ್ಧ )ಅವರ ಜಂಟಿ ದಾಖಲೆಯನ್ನು ಮುರಿದರು. ಈ ಮೂವರು ಬೌಲರ್ ಗಳು 19 ಎಸೆತಗಳಲ್ಲಿ 5 ವಿಕೆಟ್ ಗೊಂಚಲುಗಳನ್ನು ಪಡೆದಿದ್ದರು.
ವೆಸ್ಟ್ ಇಂಡೀಸ್ ನ 2ನೇ ಇನಿಂಗ್ಸ್ ನ ಮೊದಲ ಎಸೆತದಲ್ಲೇ ಸ್ಟಾರ್ಕ್ ಅವರು ಜಾನ್ ಕ್ಯಾಂಪ್ ಬೆಲ್(0) ವಿಕೆಟನ್ನು ಪಡೆದು ವಿಕೆಟ್ ಪತನಕ್ಕೆ ನಾಂದಿ ಹಾಡಿದರು. 4 ಎಸೆತಗಳ ನಂತರ ಇನ್ನೋರ್ವ 3ನೇ ಕ್ರಮಾಂಕದ ಬ್ಯಾಟರ್ ಕೆವ್‌ಲೋನ್ ಆ್ಯಂಡರ್ಸನ್(0) ವಿಕೆಟ್ ಉರುಳಿತು. ಬ್ರೆಂಡನ್ ಕಿಂಗ್(0) ವಿಕೆಟ್ ಬಿದ್ದಾಗ ವೆಸ್ಟ್ ಇಂಡೀಸ್ ಒಂದೂ ರನ್ ಗಳಿಸದೆ 3 ವಿಕೆಟ್ ಗಳನ್ನು ಕಳೆದುಕೊಂಡಿತು.
ಮಿಕೈಲ್ ಲೂಯಿಸ್ ರನ್ನು (4 ರನ್) ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಸ್ಟಾರ್ಕ್ ಅವರು 400 ಟೆಸ್ಟ್ ವಿಕೆಟ್ ಗಳನ್ನು ಪಡೆದ ಆಸ್ಟ್ರೇಲಿಯದ 4ನೇ ಬೌಲರ್ ಎನಿಸಿಕೊಂಡರು. ಶೇನ್ ವಾರ್ನ್, ಗ್ಲೆನ್ ಮೆಕ್‌ಗ್ರಾತ್ ಹಾಗೂ ನಾಥನ್ ಲಿಯೊನ್ 400 ವಿಕೆಟ್ ಕ್ಲಬ್‌ನಲ್ಲಿರುವ ಆಸೀಸ್ ಆಟಗಾರರಾಗಿದ್ದಾರೆ.
ಶೈ ಹೋಪ್(2 ರನ್) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಸ್ಟಾರ್ಕ್ ಅವರು 9 ರನ್ ವೆಚ್ಚದಲ್ಲಿ 6ನೇ ವಿಕೆಟ್ ಉರುಳಿಸಿದರು.
ಟೀ ವಿರಾಮದ ವೇಳೆಗೆ ವೆಸ್ಟ್ ಇಂಡೀಸ್ 22 ರನ್ ಗೆ 6 ವಿಕೆಟ್ ಕಳೆದುಕೊಂಡಿತ್ತು. ಗೆಲ್ಲಲು ಇನ್ನೂ 182 ರನ್ ಗಳಿಸಬೇಕಾಗಿತ್ತು. ಅತ್ಯಂತ ಕನಿಷ್ಠ ಮೊತ್ತ ಗಳಿಸಿದ ಮುಜುಗರದಿಂದ ಪಾರಾಗಲು 5 ರನ್ ಬೇಕಾಗಿತ್ತು. ಆದರೆ ಬೋಲ್ಯಾಂಡ್ ಅವರು ಜಸ್ಟಿನ್ ಗ್ರೀವ್ಸ್, ಶಮರ್ ಜೋಸೆಫ್ ಹಾಗೂ ಜೋಮೆಲ್ ವಾರಿಕನ್ ರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಪೂರೈಸಿದರು. ಬೋಲ್ಯಾಂಡ್ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯದ 10ನೇ ಬೌಲರ್ ಎನಿಸಿಕೊಂಡರು. 2010ರ ನಂತರ ಈ ಸಾಧನೆ ಮಾಡಿದ ಆಸೀಸ್ ಬೌಲರ್ ಆಗಿದ್ದಾರೆ. ವಿಂಡೀಸ್ 26 ರನ್ ಗೆ 9ನೇ ವಿಕೆಟ್ ಕಳೆದುಕೊಂಡು ನ್ಯೂಝಿಲ್ಯಾಂಡ್ ದಾಖಲೆಯನ್ನು ಸರಿಗಟ್ಟಿತು.
ಅಂತಿಮವಾಗಿ ಆತಿಥೇಯ ತಂಡವು ಆಲೌಟಾಗುವ ಮೊದಲು ಇನ್ನೊಂದು ರನ್ ಗಳಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಕನಿಷ್ಠ ಸ್ಕೋರ್ ಗಳಿಸಿದ ತಂಡವೆಂಬ ಅಪಕೀರ್ತಿಯಿಂದ ಸ್ವಲ್ಪದರಲ್ಲೇ ಪಾರಾಯಿತು. ಜೇಡನ್ ಸೀಲ್ಸ್ ವಿಕೆಟನ್ನು ಪಡೆದ ಸ್ಟಾರ್ಕ್ ವಿಂಡೀಸ್ ಇನಿಂಗ್ಸ್ ಗೆ ತೆರೆ ಎಳೆದರು.
ಇದಕ್ಕೂ ಮೊದಲು ಆಸ್ಟ್ರೇಲಿಯ ತಂಡವು ತನ್ನ 2ನೇ ಇನಿಂಗ್ಸ್ ನಲ್ಲಿ 121 ರನ್ ಗಳಿಸಿ ಆಲೌಟಾಯಿತು. 30 ವರ್ಷಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಕನಿಷ್ಠ ಸ್ಕೋರ್ ಗಳಿಸಿತು. ಅಲ್ಝಾರಿ ಜೋಸೆಫ್ ಜೀವನಶ್ರೇಷ್ಠ ಬೌಲಿಂಗ್(5-27)ಪ್ರದರ್ಶಿಸಿದರೆ, ಶಮರ್ ಜೋಸೆಫ್(4-34)ನಾಲ್ಕು ವಿಕೆಟ್ ಪಡೆದರು.
3ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಹಾಗೂ ಸರಣಿಯಲ್ಲಿ ಒಟ್ಟು 46 ರನ್ ಗಳಿಸಿ, 15 ವಿಕೆಟ್ ಗಳನ್ನು ಉರುಳಿಸಿದ ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳಿಗೆ ಭಾಜನರಾದರು.
►ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 225 ರನ್
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್: 143 ರನ್
ಆಸ್ಟ್ರೇಲಿಯ 2ನೇ ಇನಿಂಗ್ಸ್: 121 ರನ್ ಗೆ ಆಲೌಟ್
(ಕ್ಯಾಮರೂನ್ ಗ್ರೀನ್ 42, ಶಮರ್ ಜೋಸೆಫ್ 5-27, ಅಲ್ಝಾರಿ ಜೋಸೆಫ್ 3-34)
ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್: 14.3 ಓವರ್ ಗಳಲ್ಲಿ 27 ರನ್ ಗೆ ಆಲೌಟ್
(ಜಸ್ಟಿನ್ ಗ್ರೀವ್ಸ್ 11, ಸ್ಟಾರ್ಕ್ 6-9, ಬೋಲ್ಯಾಂಡ್ 3-2)
ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್
ಸರಣಿಶ್ರೇಷ್ಠ: ಮಿಚೆಲ್ ಸ್ಟಾರ್ಕ್
►ಟೆಸ್ಟ್ ಇತಿಹಾಸದಲ್ಲಿ ಕನಿಷ್ಠ ಮೊತ್ತಗಳು
1. ನ್ಯೂಝಿಲ್ಯಾಂಡ್-26 ರನ್, ಇಂಗ್ಲೆಂಡ್ ವಿರುದ್ಧ, 1955
2. ವೆಸ್ಟ್ ಇಂಡೀಸ್-27 ರನ್, ಆಸ್ಟ್ರೇಲಿಯದ ವಿರುದ್ಧ, 2025
3. ದಕ್ಷಿಣ ಆಫ್ರಿಕಾ-30 ರನ್, ಇಂಗ್ಲೆಂಡ್ ವಿರುದ್ಧ, 1896
4. ದಕ್ಷಿಣ ಆಫ್ರಿಕಾ-30 ರನ್, ಇಂಗ್ಲೆಂಡ್ ವಿರುದ್ಧ, 1924
5. ದಕ್ಷಿಣ ಆಫ್ರಿಕಾ-35 ರನ್, ಇಂಗ್ಲೆಂಡ್ ವಿರುದ್ಧ, 1899