×
Ad

ಚಾಂಪಿಯನ್ಸ್ ಲೀಗ್: ಇಂಟರ್ ಮಿಲನ್ ವಿರುದ್ಧ 5-0 ಜಯದೊಂದಿಗೆ ಚೊಚ್ಚಲ ಪ್ರಶಸ್ತಿ ಪಡೆದ ಪಿಎಸ್‌ಜಿ

Update: 2025-06-01 08:15 IST

PC: x.com/RoosterGM

ಮ್ಯೂನಿಚ್: ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಶನಿವಾರ ಸಂಜೆ ಇಂಟರ್ ಮಿಲನ್ ತಂಡವನ್ನು 5-0 ಗೋಲುಗಳ ಅಂತರದಿಂದ ಭರ್ಜರಿಯಾಗಿ ಸೋಲಿಸುವ ಮೂಲಕ ಪ್ಯಾರೀಸ್ ಸೈಂಟ್ ಜಮೈನ್ (ಪಿಎಸ್‌ಜಿ) ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಲೂಯಿಸ್ ಎನ್ರಿಕ್ ಅವರ ಯುವ ಪಡೆ ಇಡೀ ಪಂದ್ಯದಲ್ಲಿ ಪ್ರಾಬಲ್ಯ ಮೆರೆಯಿತು. ಹದಿಹರೆಯದ ಡಿಸೈರ್ ಡೋವ್ ಎರಡು ಗೋಲು ಗಳಿಸಿ, ಇತಿಹಾಸ ಸೃಷ್ಟಿಸಿದರು. 1956ರಲ್ಲಿ ಆರಂಭವಾದ ಟೂರ್ನಿಯ ಫೈನಲ್ ನಲ್ಲಿ ದಾಖಲಾದ ಭಾರಿ ಅಂತರದ ಗೆಲುವು ಎಂಬ ದಾಖಲೆ ಇದರೊಂದಿಗೆ ಸೃಷ್ಟಿಯಾಯಿತು.

ತಮ್ಮ ಹಿಂದಿನ ಕ್ಲಬ್ನ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಅಖ್ರಫ್ ಹಕೀಮಿ ಆರಂಭದಲ್ಲೇ ಗೋಲು ಗಳಿಸಿದರು. ಡೋವ್ 20ನೇ ನಿಮಿಷದಲ್ಲಿ ಅಂತವರನ್ನು 2-0 ಗೆ ಏರಿಸಿದರು. ಒಂದು ಗಂಟೆ ಮುಕ್ತಾಯದ ಅವಧಿಯಲ್ಲಿ ಮತ್ತೊಂದು ಗೋಲು ಹೊಡೆದ ಅವರು ಫಲಿತಾಂಶವನ್ನು ದೃಢಪಡಿಸಿದರು. ಖವಿಚಾ ವರಸ್ಟಖೇಲಿಯಾ ನಾಲ್ಕನೇ ಗೋಲು ಹೊಡೆದರೆ ಬದಲಿ ಆಟಗಾರ ಸೆನ್ನಿ ಮಯುಲು ಐದನೇ ಗೋಲು ಸಾಧಿಸಿ ದಾಖಲೆ ಅಂತರದ ಗೆಲುವಿಗೆ ಕಾರಣರಾದರು.

ಇಂಟರ್ ಮಿಲನ್ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿತು. 70 ವರ್ಷ ಹಿಂದೆ ಆರಂಭವಾದ ಯೂರೋಪಿಯನ್ ಕಪ್ ಮತ್ತು ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲೇ ಇದು ಫೈನಲ್ ಪಂದ್ಯದಲ್ಲಿ ಅತಿ ದೊಡ್ಡ ಗೆಲುವಾಗಿದೆ. ಪಿಎಸ್‌ಜಿಯ ಕತಾರಿ ಮಾಲೀಕರು ಹೂಡಿಕೆ ಮಾಡಿದ ವರ್ಷಗಳ ಬಳಿಕ ತಂಡಕ್ಕೆ ಇದು ದೊಡ್ಡ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಒಂದು ಬಾರಿ ಫೈನಲ್ ತಲುಪಿದ್ದ ಪಿಎಸ್‌ಜಿ, ಬೆಯೇರ್ನ್ ಮ್ಯೂನಿಚ್ ವಿರುದ್ಧ 2020ರಲ್ಲಿ ಸೋಲು ಅನುಭವಿಸಿತ್ತು. ಈ ಬಾರಿ ಪಿಎಸ್‌ಜಿ ಫ್ರೆಂಚ್ ಲೀಗ್ ಮತ್ತು ಕಪ್ ಗೆದ್ದಿದೆ. ಜತೆಗೆ ಚಾಂಪಿಯನ್ಸ್ ಲೀಗ್ ಗೆದ್ದ ಎರಡನೇ ಫ್ರೆಂಚ್ ಕ್ಲಬ್ ಎಂಬ ಹೆಗ್ಗಳಿಕೆಗೂ ಪಿಎಸ್‌ಜಿ ಪಾತ್ರವಾಗಿದೆ. ಇದಕ್ಕೂ ಮುನ್ನ ಮಾರ್ಸೆಲ್ ತಂಡ ಎಸಿ ಮಿಲನ್ ತಂಡವನ್ನು 1993ರಲ್ಲಿ ಮ್ಯೂನಿಚ್ ನಲ್ಲಿ ಮಣಿಸಿ ಪ್ರಶಸ್ತಿ ಗೆದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News