ದ್ವಿತೀಯ ಟೆಸ್ಟ್ | ಶ್ರೀಲಂಕಾದ ವಿರುದ್ಧ ಭಾರತಕ್ಕೆ 300/5

Update: 2026-08-23 23:59 IST

Photo Credit : PTI 

ಕೊಲಂಬೊ: ಮೂರನೇ ಕ್ರಮಾಂಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಸಿಡಿಸಿದ ಸತತ ಎರಡನೇ ಶತಕದ (117 ರನ್, 193 ಎಸೆತ, 12 ಬೌಂಡರಿ) ಸಹಾಯದಿಂದ ಕೊಲಂಬೊದ ಎಸ್ಎಸ್ಸಿ ಮೈದಾನದಲ್ಲಿ ರವಿವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ ತಂಡದ ವಿರುದ್ಧ 5 ವಿಕೆಟ್‌ಗಳ ನಷ್ಟಕ್ಕೆ ಬರೋಬ್ಬರಿ 300 ರನ್ ಗಳಿಸಿದೆ.

ಮೊದಲ ದಿನದಾಟದಂತ್ಯಕ್ಕೆ ಚೊಚ್ಚಲ ಪಂದ್ಯವನ್ನಾಡಿದ ಸಾರಾಂಶ್ ಜೈನ್(4 ರನ್)ಹಾಗೂ ಬ್ಯಾಟರ್ ಧ್ರುವ ಜುರೆಲ್(7 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಎರಡು ಬಾರಿಯ ಜೀವದಾನದ ಲಾಭ ಪಡೆದ ಪಡಿಕ್ಕಲ್ 117 ರನ್ ಗಳಿಸಿದ್ದಲ್ಲದೆ, ನಾಯಕ ಶುಭಮನ್ ಗಿಲ್ (50 ರನ್, 108 ಎಸೆತ, 6 ಬೌಂಡರಿ) ಅವರೊಂದಿಗೆ ಮೂರನೇ ವಿಕೆಟ್‌ಗೆ 120 ರನ್ ಹಾಗೂ ರವೀಂದ್ರ ಜಡೇಜ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 74 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಮೊತ್ತ ಹಿಗ್ಗಿಸಿದರು.

ಟಾಸ್ ಸೋತು ಭಾರತ ತಂಡದಿಂದ ಮೊದಲು ಬೌಲಿಂಗ್ಗೆ ಇಳಿಸಲ್ಪಟ್ಟ ಶ್ರೀಲಂಕಾದ ಬೌಲರ್‌ಗಳು ಉಷ್ಣಾಂಶದ ವಾತಾವರಣದಲ್ಲಿ ದಣಿದಂತೆ ಕಂಡುಬಂದರು.

ಲಂಕಾದ ಪರ ಅಸಿಥಾ ಫೆರ್ನಾಂಡೊ(3-46)ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಲಹಿರು ಕುಮಾರ ಹಾಗೂ ಕೇಶಾರ ನುವಾಂಥ ತಲಾ ಒಂದು ವಿಕೆಟನ್ನು ಪಡೆದರು.

ಕುಮಾರ ಎಸೆದ ಚೆಂಡು ರಿಷಭ್ ಪಂತ್ ಅವರ ಮಣಿಕಟ್ಟಿಗೆೆ ಬಡಿದ ಪರಿಣಾಮ ಅವರು 3 ರನ್ ಗಳಿಸಿ ಗಾಯಾಳು ನಿವೃತ್ತಿಯಾದರು. ನಂತರ ಮತ್ತೊಂದು ಶಾರ್ಟ್ ಎಸೆತವು ಜಡೇಜ ಅವರ ಮುಂಗೈಗೆ ಬಡಿದಿದೆ.

ಎಡ ಮುಂಗೈನ ನೋವಿನೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಜಡೇಜ ಎರಡು ಬಾರಿ ಫಿಝಿಯೋರಿಂದ ಚಿಕಿತ್ಸೆ ಪಡೆದರು. ನೋವಿನಿಂದಾಗಿ ಏಕಾಗ್ರತೆ ಕಳೆದುಕೊಂಡ ಜಡೇಜ 83 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 43 ರನ್ ಗಳಿಸಿ ಅಸಿಥಾ ಫೆರ್ನಾಂಡೊಗೆ ಕ್ಲೀನ್ಬೌಲ್ಡಾದರು.

ಕೊನೆಯ ಅವಧಿಯಲ್ಲಿ ಭಾರತ ತಂಡದ ಎರಡು ವಿಕೆಟ್‌ಗಳು ಕ್ಷಿಪ್ರವಾಗಿ ಉರುಳಿದವು.

ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್(45 ರನ್, 53 ಎಸೆತ, 9 ಬೌಂಡರಿ)ಹಾಗೂ ಕೆ.ಎಲ್.ರಾಹುಲ್(18 ರನ್, 33 ಎಸೆತ, 2 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್ಗೆ 37 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. ರಾಹುಲ್ ವಿಕೆಟನ್ನು ಪಡೆದ ಕುಮಾರ ಈ ಜೋಡಿಯನ್ನು ಬೇರ್ಪಡಿಸಿದರು.

ಪಡಿಕ್ಕಲ್ ಅವರೊಂದಿಗೆ 2ನೇ ವಿಕೆಟ್ಗೆ 29 ರನ್ ಸೇರಿಸಿ ಅರ್ಧಶತಕದತ್ತ ಮುಖ ಮಾಡಿದ್ದ ಯಶಸ್ವಿ ಜೈಸ್ವಾಲ್ ಕೂಡ ಫೆರ್ನಾಂಡೊಗೆ ಕ್ಲೀನ್ಬೌಲ್ಡಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News