ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ | ಸಿಂಗಲ್ಸ್ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದ ಅಲೆಕ್ಸ್ ಲ್ಯಾನಿಯೆರ್
Photo Credit : BAI
ಹೊಸದಿಲ್ಲಿ: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ಫ್ರಾನ್ಸ್‌ನ ಮೊದಲ ಆಟಗಾರ ಎನಿಸಿಕೊಂಡಿರುವ ಅಲೆಕ್ಸ್ ಲ್ಯಾನಿಯೆರ್ ಇತಿಹಾಸ ನಿರ್ಮಿಸಿದರು.
21ರ ಹರೆಯದ ಲ್ಯಾನಿಯರ್ ರವಿವಾರ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಸುಮಾರು 50 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಜಪಾನಿನ ಕೊಡೈ ನಾರಾಯೊಕಾರನ್ನು 21-11, 21-11 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ತನ್ನ ಚೊಚ್ಚಲ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಆಕ್ರಮಣಕಾರಿ ಆಟದೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಲ್ಯಾನಿಯೆರ್ ವಿರುದ್ಧ 10ನೇ ಶ್ರೇಯಾಂಕದ ನಾರಾಯೊಕಾ ಪರದಾಟ ನಡೆಸಿದರು.
ಈ ಪ್ರಶಸ್ತಿಯು ಲ್ಯಾನಿಯೆರ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಹಿಂದೆ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿಲ್ಲ. ಫೈನಲ್‌ಗೆ ತಲುಪಿದ ಫ್ರಾನ್ಸ್‌ನ ಮೊದಲ ಆಟಗಾರ ಎನಿಸಿಕೊಂಡಿರುವ ಲ್ಯಾನಿಯೆರ್ ಈಗಾಗಲೇ ಇತಿಹಾಸ ನಿರ್ಮಿಸಿದ್ದಾರೆ.
ಲ್ಯಾನಿಯೆರ್ ಸೆಮಿ ಫೈನಲ್‌ನಲ್ಲಿ ಕೆನಡಾದ ವಿಕ್ಟರ್ ಲೈ ಅವರನ್ನು 16-21, 21-13, 21-14 ಅಂತರದಿಂದ ಮಣಿಸಿದ್ದಾರೆ.
ಆ್ಯನ್ ಸೆ-ಯಂಗ್ ಮಹಿಳೆಯರ ಚಾಂಪಿಯನ್
ದಕ್ಷಿಣ ಕೊರಿಯಾದ ಆ್ಯನ್ ಸೆ-ಯಂಗ್ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಜಪಾನಿನ ಆಟಗಾರ್ತಿ ಅಕಾನೆ ಯಮಗುಚಿಯವರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಒತ್ತಡದಲ್ಲೂ ತಾಳ್ಮೆಯ ಪ್ರದರ್ಶನ ನೀಡಿ ಯಮಗುಚಿ ಅವರನ್ನು 21-17, 21-14 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಬ್ಯಾಡ್ಮಿಂಟನ್‌ನ ಅತಿ ದೊಡ್ಡ ವೇದಿಕೆಯಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದರು.