ಚೆನ್ನೈ ಓಪನ್ | ರಾಮ್‌ಕುಮಾರ್-ಸಾಕೇತ್ ಮೈನೇನಿಗೆ ಫೈನಲ್‌ನಲ್ಲಿ ಸೋಲು
PC : NDTV
ಚೆನ್ನೈ: ರಾಮ್‌ಕುಮಾರ್ ರಾಮನಾಥನ್ ಹಾಗೂ ಸಾಕೇತ್ ಮೈನೇನಿ ಶನಿವಾರ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸೋತ ಹಿನ್ನೆಲೆಯಲ್ಲಿ 2025ರ ಆವೃತ್ತಿಯ ಚೆನ್ನೈ ಓಪನ್ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.
2024ರ ಆವೃತ್ತಿಯಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದ ರಾಮ್‌ಕುಮಾರ್-ಸಾಕೇತ್‌ಗೆ ಈ ಬಾರಿ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ರಾಮ್‌ಕುಮಾರ್ ಹಾಗೂ ಸಾಕೇತ್ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್‌ನ ಡಬಲ್ಸ್ ಜೋಡಿ ಶಿಂಟಾರೊ ಮೊಚಿಝುಕಿ ಹಾಗೂ ಕೈಟೊ ಯುಸುಗಿ ವಿರುದ್ಧ 4-6, 4-6 ನೇರ ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಜಪಾನ್ ಜೋಡಿ ಮೊದಲ ಸೆಟ್‌ನ ಆರಂಭದಿಂದಲೇ ಮೇಲುಗೈ ಸಾಧಿಸಿದ್ದು ಮೊದಲ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲೂ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಶಿಂಟಾರೊ ಹಾಗೂ ಕೈಟೊ 6-4 ಅಂತರದಿಂದ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
‘‘ಇಂದು ಅತ್ಯುತ್ತಮವಾಗಿ ಆಡಿರುವ ಜಪಾನ್ ಆಟಗಾರರಿಗೆ ಅಭಿನಂದನೆಗಳು. ಭಾರತದಲ್ಲಿ ಆಡುವುದು ಯಾವಾಗಲೂ ಖುಷಿಕೊಡುತ್ತದೆ’’ಎಂದು ಸಾಕೇತ್ ಹೇಳಿದ್ದಾರೆ.
‘‘ನಾನು ಇಲ್ಲಿಗೆ ಮೊದಲ ಬಾರಿ ಆಗಮಿಸಿದಾಗ ತುಂಬಾ ಭಯಪಟ್ಟಿದ್ದೆ. ಇದೀಗ ಇಲ್ಲಿಯೇ ಇರಲು ಇಷ್ಟಪಡುವೆ. ಇನ್ನೂ ಮೂರು ವಾರಗಳ ಕಾಲ ಭಾರತ ದೇಶದೆಲ್ಲೆಡೆ ಪ್ರಯಾಣಿಸುವುದನ್ನು ಎದುರು ನೋಡುತ್ತಿರುವೆ’’ಎಂದು ಶಿಂಟಾರೊ ಹೇಳಿದ್ದಾರೆ.
ರಾಮ್‌ಕುಮಾರ್ ಹಾಗೂ ಸಾಕೇತ್ ಅವರು ಫೆಬ್ರವರಿ 17ರಿಂದ ಆರಂಭವಾಗಲಿರುವ ಎಟಿಪಿ ಪುಣೆ ಚಾಲೆಂಜರ್‌ನಲ್ಲಿ ಡಬಲ್ಸ್ ಪಂದ್ಯವನ್ನಾಡಲಿದ್ದಾರೆ.