ಚೀನಾ ಓಪನ್ ಟೆನಿಸ್ ಟೂರ್ನಿ : ಜನ್ನಿಕ್ ಸಿನ್ನರ್ ಚಾಂಪಿಯನ್
ಜನ್ನಿಕ್ ಸಿನ್ನರ್ |Photo Credit: X \ @janniksin
ಬೀಜಿಂಗ್,ಅ.2: ಅಮೆರಿಕದ ಯುವ ಆಟಗಾರ ಲರ್ನರ್ ಟಿಯೆನ್‌ರನ್ನು ಬುಧವಾರ ನಡೆದ ಚೀನಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ತನ್ನ ವೃತ್ತಿ ಬದುಕಿನ 21ನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ವಿಶ್ವದ ನಂ.2ನೇ ಆಟಗಾರ ಸಿನ್ನರ್ ಬೀಜಿಂಗ್‌ನ ಹಾರ್ಡ್ ಕೋರ್ಟ್‌ನಲ್ಲಿ ಸತತ ಎರಡನೇ ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.
24ರ ವಯಸ್ಸಿನ ಸಿನ್ನರ್ ಅವರು ನೊವಾಕ್ ಜೊಕೊವಿಕ್(6 ಬಾರಿ) ಹಾಗೂ ರಫೆಲ್ ನಡಾಲ್(2)ನಂತರ ಚೀನಾ ಓಪನ್‌ನಲ್ಲಿ ಒಂದಕ್ಕಿಂತ ಹೆಚ್ಚು ಪ್ರಶಸ್ತಿ ಜಯಿಸಿರುವ 3ನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ತನ್ನ ಮೊದಲ ಎಟಿಪಿ ಫೈನಲ್ ಆಡಿದ 19ರ ಹರೆಯದ ಟಿಯೆನ್‌ರನ್ನು ಮೊದಲ ಸೆಟ್‌ನಲ್ಲೇ ಸಿನ್ನರ್ ಹಿಮ್ಮೆಟ್ಟಿದರು. ಒಂದು ಗಂಟೆ, 12 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ವಿಶ್ವದ ನಂ.52ನೇ ಆಟಗಾರನನ್ನು ಸಿನ್ನರ್ ಸುಲಭವಾಗಿ ಸೋಲಿಸಿದರು.
ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್‌ಶಿಪ್ ನಂತರ ಸಿನ್ನರ್ ಈ ವರ್ಷ ಗೆದ್ದಿರುವ ಮೂರನೇ ಪ್ರಶಸ್ತಿ ಇದಾಗಿದೆ.