ಫ್ರೆಂಚ್ ಓಪನ್: ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾಗೆ ಸೋಲು; 2ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಕೊಕೊ ಗೌಫ್
Photo : x/CocoGauff
ಪ್ಯಾರಿಸ್: ಐತಿಹಾಸಿಕ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾರನ್ನು ಸೋಲಿಸಿರುವ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ಕ್ಲೇ ಕೋರ್ಟ್ ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಶನಿವಾರ ಒಂದು ಗಂಟೆ, 38 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.2ನೇ ಆಟಗಾರ್ತಿ ಗೌಫ್ ಬೆಲಾರುಸ್ ಆಟಗಾರ್ತಿಯನ್ನು 6-7(5), 6-2, 6-4 ಸೆಟ್ಗಳ ಅಂತರದಿಂದ ಮಣಿಸಿದರು. ಅಮೆರಿಕದ 21ರ ಹರೆಯದ ಆಟಗಾರ್ತಿ ಗೌಫ್ ಮೊದಲ ಸುತ್ತಿನಲ್ಲಿ 6-7(5) ಅಂತರದಿಂದ ಸೋಲಿನಿಂದ ಹೊರಬಂದು ಉಳಿದೆರಡು ಸೆಟ್ಗಳನ್ನು ಸುಲಭವಾಗಿ ಗೆದ್ದುಕೊಂಡರು.
2023ರ ಯು.ಎಸ್. ಓಪನ್ ಪ್ರಶಸ್ತಿ ಜಯಿಸಿರುವ ಗೌಫ್ ವೃತ್ತಿಜೀವನದಲ್ಲಿ ಎರಡನೇ ಪ್ರಮುಖ ಚಾಂಪಿಯನ್ಶಿಪ್ ಗೆದ್ದಿದ್ದಾರೆ. ಆಗ ಕೂಡ ಮೊದಲ ಸೆಟ್ನಿಂದ ಹೊರಬಂದು ಸಬಲೆಂಕಾರಿಗೆ ಸೋಲುಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದರು.
ಗೌಫ್ 2022ರಲ್ಲಿ ಫ್ರೆಂಚ್ ಓಪನ್ ಫೈನಲ್ನಲ್ಲಿ ಇಗಾ ಸ್ವಿಯಾಟೆಕ್ಗೆ ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಈ ಬಾರಿ ಹಿಂದಿನ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿದರು.
ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಮ್ಯಾಡಿಸನ್ ಕೀಸ್ ವಿರುದ್ಧ ಸೋತ ನಂತರ ಸಬಲೆಂಕಾ ಅವರು ಸತತ ಎರಡನೇ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯ ಫೈನಲ್ನಲ್ಲಿ ಸೋತಿದ್ದಾರೆ.
ಸಬಲೆಂಕಾ ಅವರು ಕಳೆದ ವರ್ಷ ಯು.ಎಸ್. ಓಪನ್ ಪ್ರಶಸ್ತಿ, 2023 ಹಾಗೂ 2024ರಲ್ಲಿ ಸತತವಾಗಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ನಂತರ 4 ಗ್ರ್ಯಾನ್ಸ್ಲಾಮ್ ಸ್ಪರ್ಧೆಗಳ ಪೈಕಿ ಮೂರನ್ನು ಗೆದ್ದಿರುವ ಏಕೈಕ ಮಹಿಳಾ ಆಟಗಾರ್ತಿ ಎನಿಸಿಕೊಳ್ಳುವ ಗುರಿ ಇಟ್ಟ್ಟುಕೊಂಡಿದ್ದರು.
ಈ ಪಂದ್ಯವು ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಪ್ಯಾರಿಸ್ನಲ್ಲಿ ಮೂರು ದಶಕಗಳಲ್ಲಿ ಎರಡನೇ ಬಾರಿ ಅಗ್ರ-ಎರಡು ರ್ಯಾಂಕಿನ ಆಟಗಾರ್ತಿಯರು ಪ್ರಶಸ್ತಿಗಾಗಿ ಹೋರಾಟ ನಡೆಸಿದರು. ಈಹಿಂದೆ 2013ರಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ಮರಿಯಾ ಶರಪೋವಾ ಅವರು ಫೈನಲ್ನಲ್ಲಿ ಸೆಣಸಾಡಿದ್ದರು.
2018ರಲ್ಲಿ ಕೂಡ ಮೆಲ್ಬರ್ನ್ನಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ನಲ್ಲಿ ವಿಶ್ವದ ಅಗ್ರ ಇಬ್ಬರು ಆಟಗಾರ್ತಿಯರಾದ ಕರೋಲಿನ್ ವೋಝ್ನಿಯಾಕಿ ಹಾಗೂ ಸಿಮೋನ್ ಹಾಲೆಪ್ ಪ್ರಶಸ್ತಿ ಕಾದಾಡಿದ್ದರು. ಗ್ರ್ಯಾನ್ಸ್ಲಾಮ್ ಫೈನಲ್ನಲ್ಲಿ ವಿಶ್ವದ ಅಗ್ರ ಇಬ್ಬರು ಆಟಗಾರ್ತಿಯರ ನಡುವೆ ನಡೆದ ಪಂದ್ಯದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಗೌಫ್ ಎಲ್ಲರ ಗಮನ ಸೆಳೆದರು.