ಐಪಿಎಲ್‍ನಿಂದ ಹಿಂದೆ ಸರಿಯುವ ಆಸೀಸ್ ಆಟಗಾರರ ಬೆಂಬಲಕ್ಕೆ ನಿಂತ ಕ್ರಿಕೆಟ್ ಆಸ್ಟ್ರೇಲಿಯಾ
PC | wikipedia
ಹೊಸದಿಲ್ಲಿ : ಅಲ್ಪಕಾಲ ಅಮಾನತುಗೊಂಡಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಪಂದ್ಯಗಳು ಮೇ 17ರಿಂದ ಪುನರಾರಂಭವಾಗಲಿದ್ದರೂ, ಮತ್ತೆ ಟೂರ್ನಿಗಾಗಿ ಭಾರತಕ್ಕೆ ಮರಳದಿರಲು ನಿರ್ಧರಿಸಿರುವ ದೇಶದ ಆಟಗಾರರ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲಿಸಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಟೂರ್ನಿಯನ್ನು ದಿಢೀರನೇ ಸ್ಥಗಿತಗೊಳಿಸಲಾಗಿತ್ತು. ಆದರೆ ಎರಡು ದೇಶಗಳ ನಡುವಿನ ಕದನ ವಿರಾಮದ ಬಳಿಕ ಮತ್ತೆ ಟೂರ್ನಿ ಮುಂದುವರಿಸಲು ನಿರ್ಧರಿಸಲಾಗಿದೆ.
ಮೇ 9ರ ಬಳಿಕ ಅನಿಶ್ಚಿತ ವಾತಾವರಣ ತಲೆದೋರಿದ ಬೆನ್ನಲ್ಲೇ ಹಲವು ಮಂದಿ ಆಸ್ಟ್ರೇಲಿಯಾ ಆಟಗಾರರು ಮತ್ತು ಅವರ ಸಿಬ್ಬಂದಿ ವಾರಾಂತ್ಯದಲ್ಲಿ ಸ್ವದೇಶಕ್ಕೆ ತೆರಳಿದ್ದಾರೆ. ಇದೀಗ ಲೀಗ್ ಪುನರಾರಂಭವಾಗಿರುವುದು ನುಂಗಲಾರದ ತುತ್ತಾಗಿದೆ. ಐಪಿಎಲ್‍ನ ಅಂತಿಮ ಹಂತದಲ್ಲಿ ಮುಂದುವರಿಯಬೇಕೇ ಅಥವಾ ದೇಶದ ಕರ್ತವ್ಯದ ಕಡೆಗೆ ಗಮನ ಹರಿಸಬೇಕೇ ಎಂಬ ಗೊಂದಲ ಮೂಡಿದೆ.
ಭಾರತಕ್ಕೆ ಮರಳಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ಆಟಗಾರರ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬೆಂಬಲಿಸುತ್ತದೆ ಎಂದು ಸಿಎ ಅಧಿಕೃತ ಹೇಳಿಕೆ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಸಜ್ಜಾಗುವುದರ ಬಗ್ಗೆ ಐಪಿಎಲ್ ಪಂದ್ಯ ಆಡುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ವಿವರಿಸಿದೆ.
ಭದ್ರತಾ ಕ್ರಮಗಳು ಮತ್ತು ಸುರಕ್ಷಾ ಕ್ರಮಗಳ ಬಗ್ಗೆ ಆಸ್ಟ್ರೇಲಿಯಾ ಸರ್ಕಾರ ಮತ್ತು ಬಿಸಿಸಿಐ ಜತೆ ಚರ್ಚಿಸಲಾಗುತ್ತಿದೆ. ಐಪಿಎಲ್ ಮುಗಿದು ಒಂದು ವಾರದ ಬಳಿಕ ಅಂದರೆ ಜೂನ್ 11ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಗಳು ನಡೆಯಲಿವೆ.