×
Ad

ವೃತ್ತಿಜೀವನದ ಅಂತ್ಯಕ್ಕೆ 1,000 ಗೋಲು ಗಳಿಸುವೆ: ಕ್ರಿಸ್ಟಿಯಾನೊ ರೊನಾಲ್ಡೊ ದೃಢ ಸಂಕಲ್ಪ

Update: 2025-12-29 21:03 IST

 ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI 

ದುಬೈ, ಡಿ.29: ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದ ಅಂತ್ಯದ ವೇಳೆಗೆ 1,000 ಗೋಲುಗಳನ್ನು ಗಳಿಸುವ ದೃಢಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ.

40ರ ಹರೆಯದ ಪೋರ್ಚುಗಲ್‌ನ ಸೂಪರ್‌ಸ್ಟಾರ್ ರೊನಾಲ್ಡೊ ಅವರು ಈ ಗುರಿಯನ್ನು ತಲುಪುವುದರಲ್ಲಿ ಸಂದೇಹವಿಲ್ಲ.

‘‘ಯಾವುದೇ ಗಾಯಗಳಿಲ್ಲದಿದ್ದರೆ ನಾನು ಖಂಡಿತವಾಗಿಯೂ ಆ ಸಂಖ್ಯೆಯನ್ನು ತಲುಪುತ್ತೇನೆ’’ಎಂದು ರವಿವಾರ ತಡರಾತ್ರಿ ದುಬೈನಲ್ಲಿ ನಡೆದ ಗ್ಲೋಬ್ ಸಾಕರ್ ಪ್ರಶಸ್ತಿ ಸಮಾರಂಭದಲ್ಲಿ ರೊನಾಲ್ಡೊ ಹೇಳಿದ್ದಾರೆ.

ಸಮಾರಂಭದಲ್ಲಿ ರೊನಾಲ್ಡೊಗೆ ಮಧ್ಯಪ್ರಾಚ್ಯದ ಅತ್ಯುತ್ತಮ ಆಟಗಾರ ಪ್ರಶಸ್ತಿ ನೀಡಲಾಯಿತು. ಶನಿವಾರ ಸೌದಿ ಪ್ರೊ ಲೀಗ್‌ನಲ್ಲಿ ಅಲ್ ನಸ್ರ್ ತಂಡದ ಪರ ಎರಡು ಗೋಲು ಗಳಿಸುವ ಮೂಲಕ ರೊನಾಲ್ಡೊ ಅವರು ವೃತ್ತಿಜೀವನದಲ್ಲಿ 956ನೇ ಗೋಲುಗಳನ್ನು ಗಳಿಸಿದರು. ಇದರಲ್ಲಿ ಪೋರ್ಚುಗಲ್ ಪರ ಪುರುಷರ ಅಂತರ್‌ರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಲ್ಲಿ ಗಳಿಸಿರುವ 143 ಗೋಲುಗಳು ಸೇರಿವೆ. ಮುಂದಿನ ವರ್ಷ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪೋರ್ಚುಗಲ್ ತಂಡವನ್ನು ನಾಯಕನಾಗಿ ರೊನಾಲ್ಡೊ ಮುನ್ನಡೆಸಲಿದ್ದಾರೆ. ಐದು ಬಾರಿಯ ವರ್ಷದ ಆಟಗಾರ ಪ್ರಶಸ್ತಿ ಪಡೆದಿರುವ ರೊನಾಲ್ಡೊ ವಿಶ್ವಕಪ್ ಆರಂಭವಾಗುವ ಹೊತ್ತಿಗೆ 41ನೇ ವರ್ಷಕ್ಕೆ ಕಾಲಿಡಲಿದ್ದಾರೆ.

‘‘ಮಧ್ಯಪ್ರಾಚ್ಯ, ಯುರೋಪ್ ಆಗಿರಲಿ, ನಾನು ಎಲ್ಲಿ ಆಡುತ್ತೇನೆ ಎಂಬುದು ಮುಖ್ಯವಲ್ಲ. ನಾನು ಯಾವಾಗಲೂ ಫುಟ್ಬಾಲ್ ಆಡುವುದನ್ನು ಆನಂದಿಸುತ್ತೇನೆ. ನನ್ನ ಗುರಿ ಏನೆಂದು ನಿಮಗೆ ತಿಳಿದಿದೆ. ನಾನು ಹೆಚ್ಚಿನ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತೇನೆ. ನಿಮಗೆಲ್ಲರಿಗೂ ತಿಳಿದಿರುವ ಸಂಖ್ಯೆಯನ್ನು ತಲುಪಲು ಬಯಸುತ್ತೇನೆ’’ ಎಂದು ಮಾಜಿ ರಿಯಲ್ ಮ್ಯಾಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಜುವೆಂಟಸ್‌ನ ಸ್ಟ್ರೈಕರ್ ರೊನಾಲ್ಡೊ ಹೇಳಿದ್ದಾರೆ.

ರೊನಾಲ್ಡೊ ತನ್ನ ವೃತ್ತಿಜೀವನದಲ್ಲಿ ಗೆಲ್ಲಲಾಗದ ಕೆಲವು ಟ್ರೋಫಿಗಳ ಪೈಕಿ ವಿಶ್ವಕಪ್ ಕೂಡ ಒಂದಾಗಿದೆ. 2016ರಲ್ಲಿ ಪೋರ್ಚುಗಲ್ ಪರ ಯುರೋಪಿಯನ್ ಚಾಂಪಿಯನ್‌ಶಿಪ್ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News