×
Ad

ಸೌದಿ ಸೂಪರ್ ಕಪ್ ಫೈನಲ್‌ ನಲ್ಲಿ ಅಲ್-ನಾಸರ್ ತಂಡಕ್ಕೆ ಸೋಲು: ತಾಳ್ಮೆ ಕಳೆದುಕೊಂಡು ಸಹ ಆಟಗಾರರತ್ತ ಹರಿಹಾಯ್ದ ರೊನಾಲ್ಡೊ

Update: 2024-08-18 23:38 IST

Screengrab:X

ರಿಯಾದ್ : ಸೌದಿ ಸೂಪರ್ ಕಪ್ ಫೈನಲ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊರ ತಂಡ ಅಲ್ ನಾಸರ್ ಎದುರಾಳಿ ಅಲ್ ಹಿಲಾಲ್ ವಿರುದ್ಧ ಶನಿವಾರ 1-4 ಗೋಲುಗಳ ಅಂತರದಿಂದ ಸೋತಿದೆ. ತನ್ನ ತಂಡದ ಏಕೈಕ ಗೋಲನ್ನು ರೊನಾಲ್ಡೊ ಬಾರಿಸಿದರು.

ಅಲ್ ನಾಸರ್ ತಂಡವು 17 ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲುಗಳನ್ನು ಬಿಟ್ಟುಕೊಟ್ಟಿತು. ಆಗ ರೊನಾಲ್ಡೊ ತಾಳ್ಮೆ ಕಳೆದುಕೊಂಡರು.

71ನೇ ನಿಮಿಷದಲ್ಲಿ ಮಾಲ್ಕಮ್ ಗೋಲು ಬಾರಿಸಿದ ಬಳಿಕ ರೊನಾಲ್ಡೊ ತನ್ನ ಸಹ ಆಟಗಾರರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಪಂದ್ಯದ ದ್ವಿತೀಯಾರ್ಧದಲ್ಲಿ ತಂಡವು ನಿಯಂತ್ರಣವನ್ನು ಕಳೆದುಕೊಂಡಾಗ ಅವರು ಕೋಪದಿಂದ ಕೈಗಳನ್ನು ಕೊಡವಿದರು ಮತ್ತು ತನ್ನ ಸಹ ಆಟಗಾರರತ್ತ ‘‘ಮಲಗಿದ್ದೀರಿ’’ ಎಂದು ಸೂಚಿಸುವ ಸನ್ನೆಯನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಅವರು ಅಶ್ಲೀಲ ಸನ್ನೆಯೊಂದನ್ನೂ ಮಾಡಿದರು. ಅದು ವಿವಾದಕ್ಕೆ ಕಾರಣವಾಯಿತು. ಅದಕ್ಕಾಗಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗೊಳಗಾದರು.

ರೊನಾಲ್ಡೊ ಸೌದಿ ಅರೇಬಿಯದ ಲೀಗ್‌ನಲ್ಲಿ ಕಳೆದ ಋತುವಿನಲ್ಲಿ ಗರಿಷ್ಠ ಗೋಲು ಗಳಿಕೆದಾರರಾಗಿದ್ದರು. ಆದರೂ ಅವರ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅವರು 35 ಗೋಲುಗಳನ್ನು ಬಾರಿಸಿ, ಸೌದಿ ಪ್ರೊ ಲೀಗ್ ಋತುವೊಂದರಲ್ಲಿ ಗರಿಷ್ಠ ಗೋಲುಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಅವರು ಅಲ್ ನಾಸರ್ ತಂಡದ ಮಾಜಿ ಆಟಗಾರ ಅಬ್ದುಲ್ ರಝಾಕ್‌ರ ದಾಖಲೆಯನ್ನು ಮುರಿದರು. ಅಬ್ದುಲ್ ರಝಾಕ್ 2019ರ ಋತುವಿನಲ್ಲಿ 34 ಗೋಲುಗಳನ್ನು ಬಾರಿಸಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು.

ಈ ಬಾರಿ ಅಲ್ ನಾಸರ್ ಕ್ಲಬ್ ದ್ವಿತೀಯ ಸ್ಥಾನಿಯಾಗಿದೆ. ಅದು ಪ್ರಥಮ ಸ್ಥಾನಿ ಅಲ್-ಹಿಲಾಲ್‌ಗಿಂತ 14 ಅಂಕ ಹಿಂದಿದೆ.

ರೊನಾಲ್ಡೊ ತನ್ನ ಗೋಲನ್ನು ಮೊದಲಾರ್ಧ ಮುಗಿಯುವ ಕೇವಲ ಒಂದು ನಿಮಿಷದ ಮೊದಲು ಬಾರಿಸಿದರು. ಆ ಮೂಲಕ ಅವರು ತನ್ನ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ದ್ವಿತೀಯಾರ್ಧದಲ್ಲಿ ರೊನಾಲ್ಡೊ ಮತ್ತು ಅವರ ತಂಡವು ಸೋಲಿನ ಸುಳಿಗೆ ಸಿಲುಕಿತು. ತಂಡವು ನಾಲ್ಕು ಗೋಲುಗಳನ್ನು ಬಿಟ್ಟುಕೊಟ್ಟಿತು.

55ನೇ ನಿಮಿಷದಲ್ಲಿ ಸರ್ಗೆಜ್ ಮಿಲಿಕೊಂವಿಚ್ ಅಲ್ ಹಿಲಾಲ್ ಪರವಾಗಿ ಗೋಲು ಬಾರಿಸಿ ಅಂಕವನ್ನು 1-1ರಲ್ಲಿ ಸಮಬಲಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News