ದಾಖಲೆಯ ಆರನೇ ವಿಶ್ವಕಪ್ ಆಡಲು ರೊನಾಲ್ಡೊ ಸಜ್ಜು: ಅರ್ಮೇನಿಯಾ ವಿರುದ್ಧ 9-1 ಜಯದೊಂದಿಗೆ ಮೆಗಾ ಟೂರ್ನಿಗೆ ಅರ್ಹತೆ
ಕ್ರಿಸ್ಟಿಯಾನೊ ರೊನಾಲ್ಡೊ | PC : X
ಅರ್ಮೇನಿಯಾ ವಿರುದ್ಧ 9-1 ಗೋಲುಗಳಿಂದ ಜಯ ಸಾಧಿಸಿದ ಪೋರ್ಚ್‍ಗಲ್ 2026ರ ವಿಶ್ವಕಪ್‍ಗೆ ಅರ್ಹತೆ ಸಂಪಾದಿಸಿದೆ. ಈ ಮೂಲಕ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಆರನೇ ಬಾರಿಗೆ ವಿಶ್ವಕಪ್ ಆಡುವ ಅವಕಾಶ ಲಭ್ಯವಾದಂತಾಗಿದೆ. ಪೋರ್ಟೊದಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ರೊನಾಲ್ಡೊ ಅಮಾನತು ಕಾರಣದಿಂದ ಗೈರುಹಾಜರಾದರೂ ಅವರ ತಂಡ ಐತಿಹಾಸಿಕ ಜಯ ಸಂಪಾದಿಸಿತು.
ಪೋರ್ಚ್‍ಗಲ್ ಪರ ಬ್ರೂನೊ ಫೆರ್ನಾಂಡಿಸ್ ಮತ್ತು ಜೋವಾ ನೆವಿಸ್ ಹ್ಯಾಟ್ರಿಕ್ ಸಾಧಿಸಿ, ಅರ್ಮೇನಿಯಾ ವಿರುದ್ಧ ನಿರ್ಣಾಯಕ ಗೆಲುವಿನ ರೂವಾರಿಗಳೆನಿಸಿದರು. ಪೋರ್ಚ್‍ಗಲ್ ಕಳೆದ ಗುರುವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 0-2 ಗೋಲುಗಳಿಂದ ಸೋತ ಪಂದ್ಯದಲ್ಲಿ ರೆಡ್‍ಕಾರ್ಡ್ ಪಡೆದು ರೊನಾಲ್ಡೊ ನಿರ್ಗಮಿಸಿದ್ದರು.
ಮುಂದಿನ ಜೂನ್‍ನಲ್ಲಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದಲ್ಲಿ ವಿಶ್ವಕಪ್ ಟೂರ್ನಿ ಆರಂಭದ ವೇಳೆಗೆ 41ನೇ ವರ್ಷಕ್ಕೆ ಕಾಲಿಡುವ ರೊನಾಲ್ಡೊಗೆ ತಮ್ಮ ವೃತ್ತಿಜೀವನದಲ್ಲಿ ಗಳಿಸಲಾಗದ ವಿಶ್ವಕಪ್ ಕಿರೀಟವನ್ನು ಗಳಿಸಲು ಕೊನೆಯ ಅವಕಾಶ ಲಭ್ಯವಾಗಲಿದೆ. ಐರ್ಲೆಂಡ್ ವಿರುದ್ಧ ಅನಿರೀಕ್ಷಿತ ಸೋಲು ಅನುಭವಿಸಿದ ಪೋರ್ಚ್‍ಗಲ್‍ಗೆ ಎಫ್ ಗುಂಪಿನ ಅಗ್ರಸ್ಥಾನ ಖಾತರಿಪಡಿಸಿಕೊಳ್ಳಲು ಅಮೆರಿಕ ವಿರುದ್ಧದ ಜಯ ಅನಿವಾರ್ಯವಾಗಿತ್ತು. ಗುಂಪಿನಲ್ಲಿ ಪೋರ್ಚ್‍ಗಲ್ ತಂಡವನ್ನು ಹಿಂದಿಕ್ಕುವ ಅವಕಾಶವಿದ್ದ ಹಂಗೇರಿ, ಬುಡಾಪೆಸ್ಟ್‍ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-3 ಅಂತರದಿಂದ ಅಚ್ಚರಿಯ ಸೋಲು ಅನುಭವಿಸಿತು.