×
Ad

ಟಿ20 ಕ್ರಿಕೆಟ್: ವಿರಾಟ್ ಕೊಹ್ಲಿ ಹಿಂದಿಕ್ಕಿ 5ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡ ಡೇವಿಡ್ ವಾರ್ನರ್

Update: 2025-08-12 21:52 IST

ಡೇವಿಡ್ ವಾರ್ನರ್ | PC : X 

ಮೆಲ್ಬರ್ನ್, ಆ.12: ವಿರಾಟ್ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ ಆಸ್ಟ್ರೇಲಿಯದ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಟಿ20 ಕ್ರಿಕೆಟ್‌ ನಲ್ಲಿ ಐದನೇ ಗರಿಷ್ಠ ರನ್ ಸ್ಕೋರರ್ ಎಂಬ ಕೀರ್ತಿಗೆ ಭಾಜನರಾದರು.

ಇಂಗ್ಲೆಂಡ್‌ನಲ್ಲಿ ಮಂಗಳವಾರ ನಡೆದ ದಿ ಹಂಡ್ರೆಡ್ ಸ್ಪರ್ಧಾವಳಿಯಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ವಿರುದ್ಧ ಲಂಡನ್ ಸ್ಪಿರಿಟ್ ಪರವಾಗಿ ಆಡಿದ ಪಂದ್ಯದಲ್ಲಿ 51 ಎಸೆತಗಳಲ್ಲಿ 71 ರನ್ ಗಳಿಸಿದ ವಾರ್ನರ್ ಈ ಮೈಲಿಗಲ್ಲು ತಲುಪಿದರು.

ವಾರ್ನರ್ ಅವರು 139ರ ಸ್ಟ್ರೈಕ್‌ ರೇಟ್‌ ನಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 71 ರನ್ ಗಳಿಸಿದ್ದರೂ ಲಂಡನ್ ಒರಿಜಿನಲ್ಸ್ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ. ಮ್ಯಾಂಚೆಸ್ಟರ್ ತಂಡದ ನೀಡಿದ 164 ರನ್ ಗುರಿ ಬೆನ್ನಟ್ಟುವಾಗ ಲಂಡನ್ ತಂಡ 6 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿ ಗಳಿಸಿ 10 ರನ್‌ನಿಂದ ಸೋತಿದೆ.

ವಾರ್ನರ್ ಅವರು ತನ್ನ ಟಿ20 ವೃತ್ತಿಜೀವನದಲ್ಲಿ 419 ಪಂದ್ಯಗಳಲ್ಲಿ 36.80ರ ಸರಾಸರಿಯಲ್ಲಿ 140ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ ನಲ್ಲಿ ಒಟ್ಟು 13,545 ರನ್ ಗಳಿಸಿದ್ದಾರೆ.

ಇದೇ ಮೊದಲ ಬಾರಿ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡಿದ ಆಸ್ಟ್ರೇಲಿಯದ ಕ್ರಿಕೆಟಿಗ 3 ಪಂದ್ಯಗಳಲ್ಲಿ 150 ರನ್ ಗಳಿಸಿ ಪಂದ್ಯಾವಳಿಯ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 75ರ ಸರಾಸರಿಯನ್ನು ಕಾಯ್ದುಕೊಂಡಿರುವ ವಾರ್ನರ್ 2 ಅರ್ಧಶತಕಗಳ ಸಹಿತ 141.50ರ ಸ್ಟ್ರೈಕ್‌ ರೇಟ್‌ ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಭಾರತದ ಸ್ಟಾರ್ ಬ್ಯಾಟರ್ ಕೊಹ್ಲಿ 414 ಟಿ20 ಪಂದ್ಯಗಳಲ್ಲಿ 41.92ರ ಸರಾಸರಿಯಲ್ಲಿ ಒಟ್ಟು 13,543 ರನ್ ಗಳಿಸಿದ್ದಾರೆ. ಕೊಹ್ಲಿ ತನ್ನ ಟಿ20 ವೃತ್ತಿಜೀವನದಲ್ಲಿ 9 ಶತಕಗಳು ಹಾಗೂ 105 ಅರ್ಧಶತಕಗಳನ್ನು ಗಳಿಸಿದ್ದಾರೆ. ಔಟಾಗದೆ 122 ಗರಿಷ್ಠ ಸ್ಕೋರಾಗಿದೆ.

ವೆಸ್ಟ್‌ಇಂಡೀಸ್ ಲೆಜೆಂಡ್ ಕ್ರಿಸ್ ಗೇಲ್ ಸಾರ್ವಕಾಲಿಕ ಟಿ20 ರನ್ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, 463 ಪಂದ್ಯಗಳಲ್ಲಿ 14,562 ರನ್ ಗಳಿಸಿದ್ದಾರೆ. ಗೇಲ್ ತನ್ನ ಯಶಸ್ವಿ ಟಿ20 ಕ್ರಿಕೆಟ್ ಜೀವನದಲ್ಲಿ 22 ಶತಕಗಳು ಹಾಗೂ 88 ಅರ್ಧಶತಕಗಳನ್ನು ಸಿಡಿಸಿದ್ದಾರೆ. 36.22ರ ಸರಾಸರಿಯಲ್ಲಿ, 144.75ರ ಸ್ಟ್ರೈಕ್‌ ರೇಟ್‌ ನಲ್ಲಿ ಬ್ಯಾಟ್ ಬೀಸಿರುವ ಗೇಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 175 ರನ್.

►ಸಾರ್ವಕಾಲಿಕ ಟಿ20 ರನ್ ಸ್ಕೋರರ್‌ ಗಳ ಪಟ್ಟಿ

ಕ್ರಿಸ್ ಗೇಲ್-14,562 ರನ್

ಕಿರೊನ್ ಪೊಲಾರ್ಡ್-13,854 ರನ್

ಅಲೆಕ್ಸ್ ಹೇಲ್ಸ್-13,814 ರನ್

ಶುಐಬ್ ಮಲಿಕ್-13,571 ರನ್

ಡೇವಿಡ್ ವಾರ್ನರ್-13,545 ರನ್

ವಿರಾಟ್ ಕೊಹ್ಲಿ-13,543 ರನ್

ಜೋಸ್ ಬಟ್ಲರ್-13,123 ರನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News