ಸುಮಾರು 3,000 ದಿನಗಳ ನಂತರ ಮೊದಲ ವಿಕೆಟ್ ಪಡೆದ ಡಾಸನ್
ಲಿಯಾಮ್ ಡಾಸನ್ | PC : X
ಮ್ಯಾಂಚೆಸ್ಟರ್, ಜು.23: ಈಗ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಲಿಯಾಮ್ ಡಾಸನ್ ಅವರ ಟೆಸ್ಟ್ ಕ್ರಿಕೆಟ್ ಪುನರಾಗಮನ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಟೆಸ್ಟ್ ಕ್ರಿಕೆಟ್‌ನಿಂದ 2,928 ದಿನಗಳ ಕಾಲ ದೂರ ಉಳಿದಿದ್ದ ಡಾಸನ್ ಬುಧವಾರ ತಾನಾಡಿದ ಪುನರಾಗಮನ ಪಂದ್ಯದಲ್ಲಿ 8 ವರ್ಷಗಳ ನಂತರ ಮೊದಲ ವಿಕೆಟನ್ನು ಕಬಳಿಸಿದರು.
ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿರುದ್ಧದ ತನ್ನ ಸ್ಪೆಲ್ ನಲ್ಲಿ ಡಾಸನ್ ಈ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು. ಭಾರತದ ಇನಿಂಗ್ಸ್‌ನ 41ನೇ ಓವರ್‌ನಲ್ಲಿ ಡಾಸನ್ ಅವರ ಸೊಗಸಾದ ಎಸೆತವು ಜೈಸ್ವಾಲ್ ವಿಕೆಟನ್ನು ಉರುಳಿಸಿತು.
106 ಎಸೆತಗಳಲ್ಲಿ 58 ರನ್ ಗಳಿಸಿದ್ದ ಎಡಗೈ ಬ್ಯಾಟರ್ ಜೈಸ್ವಾಲ್ ಮೊದಲ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಿರತ ಹ್ಯಾರಿ ಬ್ರೂಕ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
2016ರಲ್ಲಿ ಭಾರತ ತಂಡದ ವಿರುದ್ಧ ಚೆನ್ನೈನಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದ 35ರ ವಯಸ್ಸಿನ ಡಾಸನ್ 2017ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಈ ತನಕ ಅವರು ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು 7 ವಿಕೆಟ್ ಗಳನ್ನು ಪಡೆದಿದ್ದಾರೆ.