×
Ad

ವರ್ಲ್ಡ್ ಚಾಂಪಿಯನ್‌ ಶಿಪ್ ಆಫ್ ಲೆಜಂಡ್ಸ್ ನಲ್ಲಿ ಡಿ ವಿಲಿಯರ್ಸ್ ಅಜೇಯ ಶತಕ; ಹೊಸ ದಾಖಲೆ

Update: 2025-07-25 21:26 IST

 ಡಿ ವಿಲಿಯರ್ಸ್ | PC : X 

ಲಂಡನ್, ಜು. 25: ಹಿರಿಯರ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ (ವರ್ಲ್ಡ್ ಚಾಂಪಿಯನ್‌ ಶಿಪ್ ಆಫ್ ಲೆಜಂಡ್ಸ್) ಶುಕ್ರವಾರ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡದ ಎಬಿ ಡಿ ವಿಲಿಯರ್ಸ್ ಇಂಗ್ಲೆಂಡ್ ಚಾಂಪಿಯನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ ಅಜೇಯ 116 ರನ್‌ ಗಳನ್ನು ಗಳಿಸಿದ್ದಾರೆ. ಅವರ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ತನ್ನ ಎದುರಾಳಿಯನ್ನು ಭರ್ಜರಿ 10 ವಿಕೆಟ್‌ಗಳಿಂದ ಸೋಲಿಸಿದೆ.

ವರ್ಲ್ಡ್ ಚಾಂಪಿಯನ್‌ ಶಿಪ್ ಆಫ್ ಲೆಜಂಡ್ಸ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಮರಳಿರುವ 41 ವರ್ಷದ ವಿಲಿಯರ್ಸ್ ಜಡ್ಡುಗಟ್ಟಿದ ಯಾವುದೇ ಲಕ್ಷಣವನ್ನು ತೋರಿಸಲಿಲ್ಲ. ಇದಕ್ಕೂ ಮೊದಲು ಅವರು ಇಂಡಿಯಾ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ 30 ಎಸೆತಗಳಲ್ಲಿ 63 ರನ್‌ ಗಳನ್ನು ಸಿಡಿಸಿದ್ದರು.

ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ಗೆ 20 ಓವರ್‌ ಗಳಲ್ಲಿ 153 ರನ್‌ ಗಳನ್ನು ಗಳಿಸುವ ಸುಲಭ ಗುರಿ ಎದುರಾಯಿತು. ತಂಡದ ನಾಯಕನೂ ಆಗಿರುವ ಡಿ ವಿಲಿಯರ್ಸ್ ಹಾಶಿಮ್ ಅಮ್ಲ ಜೊತೆಗೆ ಇನಿಂಗ್ಸ್ ಆರಂಭಿಸಿದರು. ಈ ಜೋಡಿಯು ಇಂಗ್ಲಿಷ್ ದಾಳಿಯನ್ನು ಪುಡಿಗಟ್ಟಿತು. ಈ ಜೋಡಿಯು ಕೇವಲ 12.2 ಓವರ್‌ ಗಳಲ್ಲಿ 153 ರನ್‌ ಗಳನ್ನು ಗಳಿಸಿ ವಿಜಯವನ್ನು ಘೋಷಿಸಿತು.

ಹಾಶಿಮ್ ಅಮ್ಲ 25 ಎಸೆತಗಳಲ್ಲಿ 29 ರನ್‌ ಗಳನ್ನು ಗಳಿಸಿ ಅಜೇಯರಾಗಿ ಉಳಿದರು.

ತನ್ನ ಬ್ಯಾಟಿಂಗ್ ಮೂಲಕ ಡಿ ವಿಲಿಯರ್ಸ್ ದಾಖಲೆಯನ್ನೇ ಸೃಷ್ಟಿಸಿದರು. ಈ ಪಂದ್ಯಾವಳಿಯ ಇತಿಹಾಸದಲ್ಲೇ, 41 ವರ್ಷ ಮತ್ತು 157 ದಿನಗಳ ಪ್ರಾಯದಲ್ಲಿ, ಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 41 ಎಸೆತಗಳಲ್ಲಿ ಅವರು ಬಾರಿಸಿದ ಶತಕವೂ ಈ ಪಂದ್ಯಾವಳಿಯ ಎರಡನೇ ಅತ್ಯಂತ ವೇಗದ ಶತಕವಾಯಿತು. ಅತ್ಯಂತ ವೇಗದ ಶತಕವನ್ನು ಬಾರಿಸಿದ ದಾಖಲೆ ಆಸ್ಟ್ರೇಲಿಯದ ಬೆನ್ ಡಂಕ್ ಹೆಸರಿನಲ್ಲಿದೆ. ಅವರು ತನ್ನ 37ನೇ ವಯಸ್ಸಿನಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.

ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ಮೊದಲು ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತು. ಇಂಗ್ಲೆಂಡ್ ಚಾಂಪಿಯನ್ಸ್ 20 ಓವರ್‌ ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಿಸಿತು. ಫಿಲ್ ಮಸ್ಟರ್ಡ್ 39, ಸಮಿತ್ ಪಟೇಲ್ 24 ಮತ್ತು ಇಯೋನ್ ಮೋರ್ಗನ್ 20 ರನ್‌ ಗಳನ್ನು ಗಳಿಸಿದರು.

ಇಮ್ರಾನ್ ತಾಹಿರ್ ಮತ್ತು ವೇನ್ ಪಾರ್ನೆಲ್ ತಲಾ 2 ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News