ಚೊಚ್ಚಲ ದ್ವಿಶತಕ: ಸಚಿನ್, ಕೊಹ್ಲಿ ಸಹಿತ ಹಲವು ದಿಗ್ಗಜರ ದಾಖಲೆ ಮುರಿದ ಗಿಲ್
PC | X ; @bbctms
ಎಜ್ಬಾಸ್ಟನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ತಂಡದ ನಾಯಕ ಶುಭಮನ್ ಗಿಲ್, ಚೊಚ್ಚಲ ದ್ವಿಶತಕ ಸಾಧನೆ ಮಾಡಿದ್ದಾರೆ. ಆ ಮೂಲಕ, ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಸೇರಿದಂಎ ಹಲವರ ಹೆಸರಿನಲ್ಲಿದ್ದ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ಬರ್ಮಿಂಗ್ ಹ್ಯಾಮ್ ನ ಎಜ್ಬಾಸ್ಟನ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ, ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (87), ನಾಯಕ ಶುಭಮನ್ ಗಿಲ್ (269) ಹಾಗೂ ಎಡಗೈ ಆಲ್ ರೌಂಡರ್ ರವೀಂದ್ರ ಜಡೇಜಾ (89) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ 587 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಎಡಗೈ ಆಲ್ ರೌಂಡರ್ ರವೀಂದ್ರ ಜಡೇಜಾ ಇಬ್ಬರೂ 80ರ ಘಟ್ಟದಲ್ಲಿ ಶತಕದಿಂದ ವಂಚಿತರಾದರು. ಅವರಿಬ್ಬರೂ ಕ್ರಮವಾಗಿ 13 ರನ್ ಹಾಗೂ 11 ರನ್ ಗಳ ಅಂತರದಲ್ಲಿ ಶತಕ ಗಳಿಸುವ ಅವಕಾಶವನ್ನು ಕೈಚೆಲ್ಲಿದರು. ಆದರೆ, ನಾಲ್ಕನೆ ಸರದಿಯಲ್ಲಿ ಬ್ಯಾಟಿಂಗ್ ಗೆ ಇಳಿದ ಶುಭಮನ್ ಗಿಲ್ ಮಾತ್ರ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿ 250ರ ಗಡಿಯನ್ನು ದಾಟಿದರು.
ಭಾರತ ತಂಡದ ಮೊತ್ತ 23.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 95 ರನ್ ಆಗಿದ್ದಾಗ ಕ್ರೀಸಿಗಿಳಿದ ಶುಭಮನ್ ಗಿಲ್, 387 ಎಸೆತಗಳನ್ನು ಎದುರಿಸಿ, 30 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ ಅಮೋಘ 269 ರನ್ ಗಳಿಸಿದರು. ಅವರು ತಮ್ಮ ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ ಬರೋಬ್ಬರಿ 120 ಓವರ್ ಗಳ ಕಾಲ ಕ್ರೀಸಿನಲ್ಲಿದ್ದರು. 143.3ನೇ ಓವರ್ ನಲ್ಲಿ ಅವರು ಔಟಾದಾಗ ತಂಡದ ಮೊತ್ತ 8 ವಿಕೆಟ್ ನಷ್ಟಕ್ಕೆ 574 ರನ್ ಆಗಿತ್ತು. ಅವರ ನಿರ್ಗಮನದ ನಂತರ, ಕೇವಲ 13 ರನ್ ಗಳನ್ನು ಪೇರಿಸುವಷ್ಟರಲ್ಲಿ ಉಳಿದೆರಡು ವಿಕೆಟ್ ಗಳೂ ಪತನಗೊಂಡು, 587 ರನ್ ಗೆ ಭಾರತ ತಂಡದ ಇನಿಂಗ್ಸ್ ಅಂತ್ಯಗೊಂಡಿತು.
ಶುಭಮನ್ ಗಿಲ್ ತಮ್ಮ ಈ ಮ್ಯಾರಥಾನ್ ಇನಿಂಗ್ಸ್ ನಲ್ಲಿ ಹಲವು ದಾಖಲೆಗಳನ್ನು ಬರೆದರು. ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಸಿಡಿಸಿರುವ ಪ್ರಥಮ ದ್ವಿಶತಕ ಇದಾಗಿದ್ದು, ತಾವು ತಂಡದ ನಾಯಕತ್ವ ವಹಿಸಿಕೊಂಡ ಎರಡನೇ ಪಂದ್ಯದಲ್ಲೇ ಅವರು ಈ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.
ಎರಡನೆ ಅತಿ ಕಿರಿಯ ದ್ವಿಶತಕಧಾರಿ:
ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡದ ಪರ ದ್ವಿಶತಕ ಬಾರಿಸಿದ ಎರಡನೆ ಅತಿ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಶುಭಮನ್ ಗಿಲ್ ಭಾಜನರಾದರು. ಇದಕ್ಕೂ ಮುನ್ನ, 1964ರಲ್ಲಿ ಭಾರತ ತಂಡದ ಹಿರಿಯ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ತಂಡದೆದುರು 203 ರನ್ ಗಳಿಸುವ ಮೂಲಕ, ಭಾರತ ತಂಡದ ಪರ ಅತಿ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಸಾಧನೆಗೈದಿದ್ದರು. ಆಗ ಅವರಿಗೆ 23 ವರ್ಷ ಹಾಗೂ 39 ದಿನಗಳ ವಯಸ್ಸಾಗಿತ್ತು. ಆದರೆ, ಇದೀಗ ದ್ವಿಶತಕ ಗಳಿಸಿರುವ ಶುಭಮನ್ ಗಿಲ್ ವಯಸ್ಸು 25 ವರ್ಷ ಹಾಗೂ 298 ದಿನಗಳಾಗಿವೆ.
ಭಾರತ ತಂಡದ ಆರನೇ ನಾಯಕ:
ಭಾರತ ತಂಡದ ನಾಯಕನಾಗಿ ದ್ವಿಶತಕ ಸಾಧನೆ ಮಾಡಿದ ಆರನೆಯ ಆಟಗಾರ ಎಂಬ ಶ್ರೇಯಕ್ಕೆ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ, ಮನ್ಸೂರ್ ಅಲಿ ಖಾನ್ ಪಟೌಡಿ, ಸುನೀಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆಗೆ ಪಾತ್ರರಾಗಿದ್ದರು. ಆದರೆ, ಏಳು ಬಾರಿ ದ್ವಿಶತಕ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಗೆ ಹೋಲಿಸಿದರೆ, ಉಳಿದೆಲ್ಲರೂ ಒಮ್ಮೆ ಮಾತ್ರ ದ್ವಿಶತಕದ ಸಾಧನೆಗೈದಿದ್ದಾರೆ.
ನಾಯಕನಾಗಿ ವಿದೇಶದಲ್ಲಿ ದ್ವಿಶತಕ ಸಾಧನೆ:
ವಿದೇಶದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ ಭಾರತ ತಂಡದ ಎರಡನೆ ನಾಯಕ ಎಂಬ ದಾಖಲೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 200 ರನ್ ಗಳಿಸಿದ್ದರು. ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿಯ ಈ ಸಾಧನೆಯನ್ನು ಸರಿಗಟ್ಟಿರುವುದಲ್ಲದೆ, ತವರಿನಾಚೆ ಹೆಚ್ಚು ರನ್ ಗಳಿಸಿದ ನಾಯಕ ಎಂಬ ದಾಖಲೆಯನ್ನೂ ಬರೆದಿದ್ದಾರೆ.
250ರ ಸಾಧನೆ:
ಭಾರತ ತಂಡದ ಪರವಾಗಿ ಇಲ್ಲಿಯವರೆಗೆ ಆರು ಬ್ಯಾಟರ್ ಗಳಷ್ಟೇ 250 ರನ್ ಗಳ ಗಡಿ ದಾಟಿದ್ದಾರೆ. ಈ ಪೈಕಿ ವಿರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದು, ನಾಲ್ಕು ಬಾರಿ ಈ ಸಾಧನೆ ಮಾಡಿದ್ದಾರೆ. ಉಳಿದಂತೆ ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಕರುಣ್ ನಾಯರ್ ಹಾಗೂ ವಿರಾಟ್ ಕೊಹ್ಲಿ ತಲಾ ಒಂದು ಬಾರಿ 250ಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ್ದಾರೆ. ಇದೀಗ ಈ ಪಟ್ಟಿಗೆ ಶುಭಮನ್ ಗಿಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಇದರೊಂದಿಗೆ, ಉಪಖಂಡದ ಹೊರಗೆ ಅಧಿಕ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಶ್ರೇಯಕ್ಕೂ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ, 2004ರಲ್ಲಿ ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾದಲ್ಲಿ ಗಳಿಸಿದ್ದ ಅಜೇಯ 241 ರನ್ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.
ಸೆಹ್ವಾಗ್, ದ್ರಾವಿಡ್ ಸಾಲಿಗೆ ಗಿಲ್:
ವಿದೇಶಿ ಪಿಚ್ ಗಳಲ್ಲಿ 250ಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಗಳ ಪಟ್ಟಿಯಲ್ಲಿರುವ ವಿರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ರೊಂದಿಗೆ ಶುಭಮನ್ ಗಿಲ್ ಕೂಡಾ ಸೇರ್ಪಡೆಯಾದರು.
ವಿರೇಂದ್ರ ಸೆಹ್ವಾಗ್ 2004ರಲ್ಲಿ ಹಾಗೂ 2006ರಲ್ಲಿ ಕ್ರಮವಾಗಿ 309 ರನ್ ಹಾಗೂ 254 ರನ್ ಗಳಿಸಿದ್ದರು. ರಾಹುಲ್ ದ್ರಾವಿಡ್ 2004ರಲ್ಲಿ 270 ರನ್ ಗಳಿಸಿದ್ದರು. ಈ ಇಬ್ಬರೂ ಪಾಕಿಸ್ತಾನದಲ್ಲೇ ಈ ಸಾಧನೆಗೈದಿದ್ದರು.
ಇಂಗ್ಲೆಂಡ್ ನಲ್ಲಿ 250+ ರನ್:
ಇಂಗ್ಲೆಂಡ್ ಪ್ರವಾಸದಲ್ಲಿ 250ಕ್ಕಿಂತ ಅಧಿಕ ರನ್ ಗಳಿಸಿದ ಮೂರನೆಯ ವಿದೇಶಿ ನಾಯಕ ಎಂಬ ಶ್ರೇಯ ಶುಭಮನ್ ಗಿಲ್ ಮುಡಿಗೇರಿತು. ಇದಕ್ಕೂ ಮೊದಲು 1964ರಲ್ಲಿ ಆಸ್ಟ್ರೇಲಿಯಾ ತಂಡದ ಬಾಬ್ ಸಿಂಪ್ಸನ್ 311 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ತಂಡದ ಗ್ರೇಮ್ ಸ್ಮಿತ್ 2003ರಲ್ಲಿ ಎರಡು ಬಾರಿ ಕ್ರಮವಾಗಿ 277 ರನ್ ಹಾಗೂ 259 ರನ್ ಗಳಿಸಿದ್ದರು. ಇದೀಗ ಈ ಸಾಲಿಗೆ ಶುಭಮನ್ ಗಿಲ್ ಕೂಡಾ ಸೇರ್ಪಡೆಯಾಗಿದ್ದಾರೆ.
ನಾಯಕನಾಗಿ ಗರಿಷ್ಠ ಮೊತ್ತ:
ಭಾರತ ತಂಡದ ನಾಯಕನಾಗಿ ಅತ್ಯಧಿಕ ಮೊತ್ತ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನೂ ಶುಭಮನ್ ಗಿಲ್ ಬರೆದಿದ್ದಾರೆ. ಈವರೆಗೆ ವಿರಾಟ್ ಕೊಹ್ಲಿ ಗರಿಷ್ಠ ರನ್ ಗಳಿಸಿದ ಭಾರತ ತಂಡದ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. 2019ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅವರು 254 ರನ್ ಗಳಿಸಿದ್ದರು.
ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ರನ್ ಗಳಿಕೆ:
ಇಂಗ್ಲೆಂಡ್ ನೆಲದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಕಲೆ ಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೂ ಶುಭಮನ್ ಗಿಲ್ ಪಾತ್ರರಾದರು. ಇದಕ್ಕೂ ಮುನ್ನ, 1979ರಲ್ಲಿ ಭಾರತ ತಂಡದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗಾವಸ್ಕರ್ ಗಳಿಸಿದ್ದ 221 ರನ್ ಮೊತ್ತವೇ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು.