ಐಸಿಸಿ ಟಿ20 ಬೌಲರ್ ರ‍್ಯಾಂಕಿಂಗ್; 2ನೇ ಸ್ಥಾನಕ್ಕೇರಿದ ದೀಪ್ತಿ ಶರ್ಮಾ
ದೀಪ್ತಿ ಶರ್ಮಾ | PC : ICC
ದುಬೈ: ಭಾರತದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ದೀಪ್ತಿ ಶರ್ಮಾ, ಮಂಗಳವಾರ ಬಿಡುಗಡೆಗೊಂಡಿರುವ ನೂತನ ಐಸಿಸಿ ಟಿ20 ಬೌಲರ್ ರ‍್ಯಾಂಕಿಂಗ್ನಲ್ಲಿ ಒಂದು ಸ್ಥಾನ ಮೇಲಕ್ಕೇರಿ 2ನೇ ಸ್ಥಾನದಲ್ಲಿದ್ದಾರೆ. ಅವರು ಆಸ್ಟ್ರೇಲಿಯದ ಅನಾಬೆಲ್ ಸದರ್ ಲ್ಯಾಂಡ್ ರನ್ನು ಹಿಂದಿಕ್ಕಿದ್ದಾರೆ. ಪ್ರಥಮ ಸ್ಥಾನದಲ್ಲಿರುವ ಪಾಕಿಸ್ತಾನದ ಸದಿಯಾ ಇಕ್ಬಾಲ್ ರಿಗಿಂತ ಕೇವಲ 8 ಅಂಕಗಳಿಂದ ಹಿಂದಿದ್ದಾರೆ.
27 ವರ್ಷದ ದೀಪ್ತಿ ಕಳೆದ 6 ವರ್ಷಗಳಲ್ಲಿ ಹೆಚ್ಚಿನ ಅವಧಿಯಲ್ಲಿ ಟಿ20 ಬೌಲರ್ ಗಳ ಪಟ್ಟಿಯಲ್ಲಿ ಅಗ್ರ 10ರ ಸ್ಥಾನದಲ್ಲಿದ್ದರು. ಆದರೆ, ಅವರು ಈವರೆಗೆ 1ನೇ ಸ್ಥಾನಕ್ಕೆ ಏರಿಲ್ಲ.
ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅವರು 3 ವಿಕೆಟ್ ಗಳನ್ನು ಉರುಳಿಸಿದ ಬಳಿಕ ಅವರ ಸ್ಥಾನದಲ್ಲಿ ಪ್ರಗತಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಇನ್ನುಳಿದಿರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದರೆ ಅವರು ಅಗ್ರ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
ಬ್ಯಾಟರ್ಗಳ ಪೈಕಿ, ಭಾರತದ ಜೆಮಿಮಾ ರೊಡ್ರಿಗಸ್ 2 ಸ್ಥಾನಗಳನ್ನು ಗಳಿಸಿ 12ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ಬಳಿಕ ಅವರ ಸ್ಥಾನದಲ್ಲಿ ಏರಿಕೆಯಾಗಿದೆ.