ಐಸಿಸಿ ಮಹಿಳಾ ಏಕದಿನ ಆಟಗಾರರ ರ‍್ಯಾಂಕಿಂಗ್ : ದೀಪ್ತಿ ಶರ್ಮಾ 5ನೇ ಸ್ಥಾನಕ್ಕೆ
ದೀಪ್ತಿ ಶರ್ಮಾ | PTI
ದುಬೈ, ಸೆ. 23: ಐಸಿಸಿ ಮಹಿಳಾ ಏಕದಿನ ಆಟಗಾರರ ರ‍್ಯಾಂಕಿಂಗ್ನಲ್ಲಿ, ಬೌಲರ್‌ಗಳ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ ಎರಡು ಸ್ಥಾನ ಮೇಲೇರಿ ಐದನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯ ಎರಡು ಪಂದ್ಯಗಳಲ್ಲಿ ಅವರು ಪಡೆದಿರುವ ತಲಾ ಎರಡು ವಿಕೆಟ್‌ಗಳು ಈ ಭಡ್ತಿಯಲ್ಲಿ ಪ್ರಧಾನ ಪಾತ್ರ ವಹಿಸಿವೆ.
ಭಾರತೀಯ ವೇಗಿ ಕ್ರಾಂತಿ ಗೌಡ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಸಾಧನೆಯನ್ನು ಮುಂದುವರಿಸಿದ್ದು, ಅವರು 23 ಸ್ಥಾನಗಳನ್ನು ಮೇಲೇರಿ 39ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಸೋಫೀ ಎಕ್ಸಲ್‌ಸ್ಟೋನ್ ಬೌಲರ್‌ಗಳ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬ್ಯಾಟರ್‌ಗಳ ವಿಭಾಗದಲ್ಲಿ ಭಾರತದ ಸ್ಮತಿ ಮಂಧಾನ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಅದೇ ವೇಳೆ, ದಕ್ಷಿಣ ಆಫ್ರಿಕದ ಬ್ಯಾಟರ್ ತಝ್ಮಿನ್ ಬ್ರಿಟ್ಸ್ 15 ಸ್ಥಾನ ಮೇಲಕ್ಕೇರಿ ಐದನೇ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಪಂದ್ಯ ಗೆಲ್ಲಿಸುವ ಶತಕ ಬಾರಿಸಿದ ಆಸ್ಟ್ರೇಲಿಯದ ಬೆತ್ ಮೂನಿ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನ ಗಳಿಸಿದ್ದಾರೆ.