×
Ad

ಡೆಲ್ಲಿ ಪ್ರೀಮಿಯರ್ ಲೀಗ್ | ಹರಾಜು ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸಹೋದರನ ಮಗ, ವೀರೇಂದ್ರ ಸೆಹ್ವಾಗ್ ಪುತ್ರನ ಹೆಸರು

Update: 2025-06-30 19:51 IST

ವೀರೇಂದ್ರ ಸೆಹ್ವಾಗ್ | PC : ipl.com

ಹೊಸದಿಲ್ಲಿ: ವಿರಾಟ್ ಕೊಹ್ಲಿ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿಯವರ ಪುತ್ರ ಆರ್ಯವೀರ್ ಕೊಹ್ಲಿ(15 ವರ್ಷ), ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ರ ಪುತ್ರ ಆರ್ಯವೀರ್ ಸೆಹ್ವಾಗ್ ಜುಲೈ 5ರಂದು ನಿಗದಿಯಾಗಿರುವ ಡೆಲ್ಲಿ ಪ್ರೀಮಿಯರ್ ಲೀಗ್(ಡಿಪಿಎಲ್)ಹರಾಜಿಗಾಗಿ ಸಿದ್ಧಪಡಿಸಿರುವ ಆಟಗಾರರ ಕಿರುಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಅವರಿಂದ ವೆಸ್ಟ್ ದಿಲ್ಲಿ ಕ್ರಿಕೆಟ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಆರ್ಯವೀರ್ ಲೆಗ್ ಸ್ಪಿನ್ನರ್ ಆಗಿದ್ದಾರೆ. ಕಳೆದ ವರ್ಷ ದಿಲ್ಲಿ ಅಂಡರ್-16 ತಂಡದಲ್ಲಿ ನೋಂದಾಯಿತ ಆಟಗಾರನಾಗಿದ್ದ ಅವರನ್ನು ಸಿ ವಿಭಾಗದಲ್ಲಿ ಇರಿಸಲಾಗಿದೆ. ದಿಲ್ಲಿ ಕ್ರಿಕೆಟ್‌ನಲ್ಲಿ ನೋಂದಾಯಿತ ಆಟಗಾರರು ಅಂತಿಮ 30ರ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಸೆಹ್ವಾಗ್ ಪುತ್ರ ಆರ್ಯವೀರ್ ದಿಲ್ಲಿಯ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದು, ಮೇಘಾಲಯ ತಂಡದ ವಿರುದ್ಧ 297 ರನ್ ಗಳಿಸಿ ಗಮನ ಸೆಳೆದಿದ್ದರು. ತನ್ನ ಕಿರಿಯ ಸಹೋದರ ವೇದಾಂತ್(15 ವರ್ಷ)ಜೊತೆಗೆ ಬಿ ಶ್ರೇಣಿಯಲ್ಲಿದ್ದಾರೆ. ವೇದಾಂತ್ ಸೆಹ್ವಾಗ್ ಕೂಡ ಅಂಡರ್-16 ತಂಡದಲ್ಲಿ ಆಡಿದ್ದಾರೆ.

ಈ ವರ್ಷದ ಡಿಪಿಎಲ್‌ ನಲ್ಲಿ 8 ತಂಡಗಳು ಇರುತ್ತವೆ. ಔಟರ್ ಡೆಲ್ಲಿ ಹಾಗೂ ನ್ಯೂ ಡೆಲ್ಲಿ ತಂಡಗಳು ಹಾಲಿ ಆರು ತಂಡಗಳಾಗಿರುವ ಈಸ್ಟ್ ಡೆಲ್ಲಿ ರೈಡರ್ಸ್, ನಾರ್ತ್ ಡೆಲ್ಲಿ ಸ್ಟ್ರೈಕರ್ಸ್‌, ವೆಸ್ಟ್ ಡೆಲ್ಲಿ ಲಯನ್ಸ್, ಸೌತ್ ಡೆಲ್ಲಿ ಸೂಪರ್‌ಸ್ಟಾರ್, ಪುರಾನಿ ಡೆಲ್ಲಿ ಹಾಗೂ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಅನ್ನು ಸೇರಲಿವೆ.

ಕಳೆದ ವರ್ಷ ಈಸ್ಟ್ ಡೆಲ್ಲಿ ರೈಡರ್ಸ್ ರೋಚಕ ಫೈನಲ್‌ ನಲ್ಲಿ ಡೆಲ್ಲಿ ಸೂಪರ್‌ಸ್ಟಾರ್ಸ್ ತಂಡವನ್ನು 3 ರನ್‌ನಿಂದ ಸೋಲಿಸಿ ಮೊದಲ ಆವೃತ್ತಿಯ ಡೆಲ್ಲಿ ಪ್ರೀಮಿಯರ್ ಲೀಗ್ ಟಿ-20 ಪ್ರಶಸ್ತಿಯನ್ನು ಜಯಿಸಿತ್ತು.

ಮೊದಲ ಆವೃತ್ತಿಯಲ್ಲಿ ಪ್ರಿಯಾಂಶ್ ಆರ್ಯ ಹಾಗೂ ದಿಗ್ವೇಶ್ ರಾಠಿ ಅವರಂತಹ ಪ್ರತಿಭೆಗಳು ಹೊರಹೊಮ್ಮಿದ್ದರು. ಈ ಇಬ್ಬರು ಐಪಿಎಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಯಾಂಶ್ ಆರ್ಯ(3.80 ಕೋ.ರೂ.)2025ರ ರನ್ನರ್ಸ್ ಅಪ್ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿದ್ದರೆ, ರಾಠಿ ಅವರು ಲಕ್ನೊ ತಂಡವನ್ನು ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News