ಉದ್ದೀಪನ ದ್ರವ್ಯ ಸೇವನೆ ಪತ್ತೆ : ಓಟಗಾರ್ತಿ ಧನಲಕ್ಷ್ಮಿ ತಾತ್ಕಾಲಿಕ ಅಮಾನತು
ಧನಲಕ್ಷ್ಮಿ | Photo Credit : olympics.com
ಹೊಸದಿಲ್ಲಿ, ಅ. 6: ಉದ್ದೀಪನ ದ್ರವ್ಯ ಸೇವಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ವೇಗದ ಓಟಗಾರ್ತಿ ಧನಲಕ್ಷ್ಮಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಅವರು ಡ್ರೋಸ್ಟನೊಲೋನ್ ಸ್ಟೀರಾಯ್ಡ್ ಸೇವಿಸಿರುವುದು 2ನೇ ಬಾರಿ ಪತ್ತೆಯಾಗಿತ್ತು. ಪಂಜಾಬ್‌ನ ಸಂಗ್ರೂರ್‌ನಲ್ಲಿ ನಡೆದ ಭಾರತೀಯ ಮುಕ್ತ ಅತ್ಲೆಟಿಕ್ಸ್ ಕೂಟದ ವೇಳೆ ಜುಲೈ 27ರಂದು ಅವರ ವಿವಾದಾತ್ಮಕ ಮಾದರಿಯನ್ನು ಸಂಗ್ರಹಿಸಲಾಗಿತ್ತು.
ಈಗ ಧನಲಕ್ಷ್ಮಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಅವರ ಈ ಹಿಂದಿನ ನಿಷೇಧ ಅವಧಿಯು ಈ ವರ್ಷದ ಜುಲೈ 17ರಂದು ಕೊನೆಗೊಂಡಿತ್ತು. ಬಳಿಕ, ಹತ್ತೇ ದಿನಗಳಲ್ಲಿ ಅವರು ಮತ್ತೆ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆ (ನಾಡ)ಯ ಬಲೆಗೆ ಬಿದ್ದಿದ್ದಾರೆ. ಸಂಗ್ರೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು 100 ಮೀಟರ್ ಓಟವನ್ನು 11.55 ಸೆಕೆಂಡ್‌ಗಳಲ್ಲಿ ಪೂರೈಸಿ ಚಿನ್ನ ಗೆದ್ದಿದ್ದರು.
2ನೇ ಬಾರಿ ಉದ್ದೀಪನ ದ್ರವ್ಯ ಸೇವಿಸಿ ಸಿಕ್ಕಿ ಬಿದ್ದಿರುವ ಹಿನ್ನೆಲೆಯಲ್ಲಿ ಅವರು 8 ವರ್ಷಗಳ ನಿಷೇಧಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ನಿಷೇಧವನ್ನು ತಪ್ಪಿಸಬೇಕಾದರೆ, ಮುಂದೆ ನಡೆಯಲಿರುವ ವಿಚಾರಣೆಗಳಲ್ಲಿ ಉದ್ದೀಪನ ದ್ರವ್ಯದ ಬಳಕೆಯು ಉದ್ದೇಶಪೂರ್ವಕವಲ್ಲ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ.