ಧೋನಿ ಮುಂದಿನ ವರ್ಷವೂ ಐಪಿಎಲ್ ನಲ್ಲಿ ಆಡುತ್ತಾರೆ: ಸುರೇಶ್ ರೈನಾ
ಸುರೇಶ್ ರೈನಾ (instagram) | ಧೋನಿ (PTI)
ಚೆನ್ನೈ : ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಹೇಂದ್ರ ಸಿಂಗ್ ಧೋನಿ ಆಡುತ್ತಾರಾ ಎನ್ನುವುದು ಇತ್ತೀಚಿನ ಕೆಲವು ವರ್ಷಗಳ ಪ್ರತಿ ಐಪಿಎಲ್ ನಲ್ಲಿ ಎಲ್ಲರ ಮನಸ್ಸಿನಲಿದ್ದ ಪ್ರಶ್ನೆಯಾಗಿದೆ. ಧೋನಿಯ ಭವಿಷ್ಯದ ಬಗ್ಗೆ ಕ್ರಿಕೆಟ್ ಪರಿಣತರು ಮತ್ತು ಪಂಡಿತರ ಎಲ್ಲಾ ಊಹಾಪೋಹಗಳನ್ನು ಧಿಕ್ಕರಿಸಿ ಪ್ರತಿ ವರ್ಷವೂ ಐಪಿಎಲ್ ನಲ್ಲಿ ಆಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಬರುತ್ತಿದ್ದಾರೆ. ಉತ್ತಮ ನಿರ್ವಹಣೆಯನ್ನೂ ನೀಡುತ್ತಿದ್ದಾರೆ.
ಕಳೆದ ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ಧೋನಿ ಕುಂಟುವುದು ಕಂಡುಬಂದಿತ್ತು. ಆಗ ಮತ್ತೊಮ್ಮೆ ಎಲ್ಲರ ಮನಸ್ಸಿನಲ್ಲಿ ಮೇಲಿನ ಪ್ರಶ್ನೆ ಮೂಡಿತು. ಪಂದ್ಯದ ಬಳಿಕ ಆಟಗಾರರು ತಂಡದ ಬಸ್ಸಿನತ್ತು ಹೋಗುತ್ತಿರುವಾಗ, ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಧೋನಿಗೆ ನಡೆಯಲು ಸಹಾಯ ಮಾಡುತ್ತಿರುವುದು ಗೋಚರಿಸಿತು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಜಯಿಸಿದ ಬಳಿಕ, ತಂಡದ ಬಸ್ ನತ್ತ ಹೋಗುತ್ತಿರುವಾಗ ಧೋನಿಗೆ ಸುರೇಶ್ ರೈನಾ ನಡೆಯಲು ಸಹಾಯ ಮಾಡುವ ವೀಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆಗೊಳಿಸಿದೆ.
ಜಿಯೋ ಸಿನೇಮಾದಲ್ಲಿ ಚರ್ಚೆಯೊಂದರ ವೇಳೆ, ಹಾಲಿ ಐಪಿಎಲ್ ಬಳಿಕ ಧೋನಿ ನಿವೃತ್ತರಾಗುವರೇ ಅಥವಾ ಮುಂದಿನ ಐಪಿಎಲ್ ನಲ್ಲಿ ಆಡಲು ಮರಳುವರೇ ಎಂಬ ಪ್ರಶ್ನೆಯನ್ನು ರೈನಾಗೆ ಕೇಳಲಾಯಿತು. ಅದಕ್ಕೆ ಉತ್ತರ ಥಟ್ಟನೆ ಬಂತು. ‘‘ಆಡುತ್ತಾರೆ’’ ಎಂದು ರೈನಾ ಹೇಳಿದರು.
ಧೋನಿ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರ ಎಡಗಾಲಿಗೆ ಬಿಗಿಯಾಗಿ ಬಟ್ಟೆ ಸುತ್ತಲಾಗಿತ್ತು.
ಧೋನಿ ಮಂಡಿ ನೋವಿನಿಂದ ಬಳಲುತ್ತಿದ್ದಾರೆ ಎನ್ನುವುದನ್ನು ಚೆನ್ನೈ ಸೂಪರ್ ಕಿಂಗ್ಸ್ನ ಬೌಲಿಂಗ್ ಸಲಹೆಗಾರ ಎರಿಕ್ ಸಿಮನ್ಸ್ ಸೋಮವಾರ ಒಪ್ಪಿಕೊಂಡಿದ್ದಾರೆ. ಆದರೆ, ನೋವನ್ನು ಹೊರಗೆ ತೋರ್ಪಡಿಸದೇ ಅವರು ಅದನ್ನು ದಿಟ್ಟವಾಗಿ ನಿಭಾಯಿಸಿದ್ದಾರೆ.
‘‘ಅವರ ಗಾಯಗಳ ಬಗ್ಗೆ ಅವರಿಗಿಂತ ಹೆಚ್ಚು ಬೇರೆಯವರು ಕಾಳಜಿ ಹೊಂದಿದ್ದಾರೆ. ಅವರು ನಾನು ನೋಡಿರುವ ಜನರಲ್ಲೇ ಅತ್ಯಂತ ಕಠಿಣ ವ್ಯಕ್ತಿ. ಅವರು ಎಷ್ಟು ಗಾಯ ಅನುಭವಿಸುತ್ತಿದ್ದಾರೆ ಅಥವಾ ಅನುಭವಿಸುತ್ತಿಲ್ಲ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ. ಅವರು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ’’ ಎಂದರು.