×
Ad

ಚೆಸ್ ವಿಶ್ವ ಕಪ್ ಜಯಿಸಿದ ಜಾವೊಖಿರ್ ಸಿಂಡರೊವ್; ಅತ್ಯಂತ ಕಿರಿಯ ಆಟಗಾರನಾಗಿ ದಾಖಲೆ

Update: 2025-11-27 21:12 IST

 ಜಾವೊಖಿರ್ ಸಿಂಡರೊವ್ | Photo Credit : NDTV 

ಪಣಜಿ, ನ. 27: ಚೆಸ್ ವಿಶ್ವ ಕಪ್ ಜಯಿಸಿದ ಅತ್ಯಂತ ಕಿರಿಯ ಆಟಗಾರನಾಗಿ ಉಝ್ಬೆಕಿಸ್ತಾನದ ಹದಿಹರಯದ ಪ್ರತಿಭೆ ಜಾವೊಖಿರ್ ಸಿಂಡರೊವ್ ಇತಿಹಾಸ ಸೇರಿದ್ದಾರೆ. ಅವರು ಗೋವಾದಲ್ಲಿ ಬುಧವಾರ ರೋಮಾಂಚಕ ಟೈಬ್ರೇಕ್ ಫಿನಾಲೆಯಲ್ಲಿ ಚೀನಾದ ವೇ ಯಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ಈ ಪಂದ್ಯಾವಳಿಯಲ್ಲಿ 19 ವರ್ಷದ ಸಿಂಡರೊವ್ 16ನೇ ಶ್ರೇಯಾಂಕಿತನಾಗಿ ತನ್ನ ಸ್ಪರ್ಧೆ ಆರಂಭಿಸಿದರು. ಇಲ್ಲಿ ಚೆಸ್ ಜಗತ್ತಿನ ಘಟಾನುಘಟಿಗಳು ಒಬ್ಬರ ನಂತರ ಒಬ್ಬರಂತೆ ಹೊರಬಿದ್ದರು. ತನ್ನದೇ ದೇಶದ ನೊಡಿರ್ಬೆಕ್ ಯಾಕೂಬೊವ್ ವಿರುದ್ಧದ ಜಿದ್ದಾಜಿದ್ದಿನ ಸೆಮಿಫೈನಲ್‌ನಲ್ಲಿ ಅವರು ಪಂದ್ಯವನ್ನು ಟೈಬ್ರೇಕ್‌ಗೆ ಒಯ್ದರು ಹಾಗೂ ಟೈಬ್ರೇಕ್‌ನಲ್ಲಿ ಜಯ ಗಳಿಸಿದರು.

ವೇ ಯಿ ಮತ್ತು ಸಿಂಡರೊವ್ ಇಬ್ಬರೂ ಪ್ರಶಸ್ತಿ ಸುತ್ತಿಗೆ ಏರುವ ಮೂಲಕ 2026ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ ಗೆ ಅರ್ಹತೆ ಪಡೆದಿದ್ದಾರೆ.

ಫೈನಲ್‌ ನಲ್ಲಿ, ಎರಡನೇ 15’10’’ ರ್ಯಾಪಿಡ್ ಟೈಬ್ರೇಕ್‌ ನಲ್ಲಿ ಎದುರಾಳಿಯನ್ನು ಸೋಲಿಸಿದ ಬಳಿಕ, ಸಿಂಡರೊವ್ ವಿಶ್ವಕಪ್‌ ನ ಮಾಲೀಕರಾದರು.

ಅವರ ವಿಜಯವು ಚೆಸ್ ಜಗತ್ತಿನಲ್ಲಿ ಆಗುತ್ತಿರುವ ಗಮನಾರ್ಹ ಬದಲಾವಣೆಯೊಂದನ್ನು ಸೂಚಿಸುತ್ತಿದೆ. ಚೆಸ್‌ನಲ್ಲಿ ಹದಿಹರಯದ ಆಟಗಾರರ ಪ್ರಾಬಲ್ಯಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಮೊದಲು ಡಿ. ಗುಕೇಶ್ ವಿಶ್ವ ಚಾಂಪಿಯನ್‌ ಶಿಪ್ ಗೆದ್ದರು. ಬಳಿಕ ದಿವ್ಯಾ ದೇಶ್‌ಮುಖ್ ಮಹಿಳಾ ವಿಶ್ವಕಪ್ ಗೆದ್ದರು. ಈಗ ಪ್ರಮುಖ ಪ್ರಶಸ್ತಿಯನ್ನು ಗೆದ್ದ ಮೂರನೇ ಹದಿಹರಯದ ಆಟಗಾರನಾಗಿ ಸಿಂಡರೊವ್ ಹೊರಹೊಮ್ಮಿದ್ದಾರೆ. ಇದು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸಂಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News