×
Ad

‘‘ಅಂಗಗಳನ್ನು ದಾನ ಮಾಡಿ, ಜೀವಗಳನ್ನು ಉಳಿಸಿ’’ | ಹಸಿರು ತೋಳಪಟ್ಟಿ ಧರಿಸಿ ಚಾಲನೆ ನೀಡಿದ ಆಟಗಾರರು

Update: 2025-02-12 21:30 IST

PC : PTI 

ಅಹ್ಮದಾಬಾದ್‌: ಬುಧವಾರ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ, ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಹಸಿರು ತೋಳಪಟ್ಟಿ ಧರಿಸಿ ಆಡಿದರು. ‘‘ಅಂಗಗಳನ್ನು ದಾನ ಮಾಡಿ, ಜೀವಗಳನ್ನು ಉಳಿಸಿ’’ ಎಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಭಿಯಾನಕ್ಕೆ ಬೆಂಬಲ ಸೂಚಿಸಲು ಆಟಗಾರರು ಈ ಕ್ರಮ ತೆಗೆದುಕೊಂಡಿದ್ದಾರೆ.

ಅಹ್ಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಪಂದ್ಯ ಆರಂಭವಾದ ಸ್ವಲ್ಪವೇ ಹೊತ್ತಿನ ಬಳಿಕ ಬಿಸಿಸಿಐ ಹೇಳಿಕೆಯೊಂದರ ಮೂಲಕ ಈ ಮಾಹಿತಿ ನೀಡಿದೆ. ‘‘ಬಿಸಿಸಿಐಯ ‘ಅಂಗಗಳನ್ನು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನಕ್ಕೆ ಬೆಂಬಲ ಸೂಚಿಸಿ ಉಭಯ ತಂಡಗಳ ಆಟಗಾರರು ಹಸಿರು ತೋಳಪಟ್ಟಿಯನ್ನು ಧರಿಸಿದ್ದಾರೆ. ಈ ಅಭಿಯಾನದ ನೇತೃತ್ವವನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷ ಜಯ ಶಾ ವಹಿಸಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.

ಈ ಅಭಿಯಾನವನ್ನು ಐಸಿಸಿ ಅಧ್ಯಕ್ಷ ಹಾಗೂ ಬಿಸಿಸಿಐ ಮಾಜಿ ಕಾರ್ಯದರ್ಶಿ ಶಾ ಸೋಮವಾರ ಘೋಷಿಸಿದ್ದಾರೆ.

‘‘ಅಹ್ಮದಾಬಾದ್‌ನಲ್ಲಿ ಫೆಬ್ರವರಿ 12ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ಸಂದರ್ಭದಲ್ಲಿ, ‘ಅಂಗಗಳನ್ನು ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲು ನಾವು ಹೆಮ್ಮೆ ಪಡುತ್ತೇವೆ. ಮೈದಾನವನ್ನೂ ಮೀರಿ ಪ್ರೇರೇಪಣೆ ನೀಡುವ, ಒಗ್ಗೂಡಿಸುವ ಮತ್ತು ಶಾಶ್ವತ ಪರಿಣಾಮವನ್ನು ಬೀರುವ ಸಾಮರ್ಥ್ಯ ಕ್ರೀಡೆಗಿದೆ. ಎಲ್ಲಕ್ಕಿಂತಲೂ ಶ್ರೇಷ್ಠ ಉಡುಗೊರೆಯಾಗಿರುವ ಜೀವದ ಉಡುಗೊರೆಯನ್ನು ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಂದು ಹೆಜ್ಜೆ ಮುಂದಿಡುವಂತೆ ಈ ಅಭಿಯಾನದ ಮೂಲಕ ನಾವು ಒತ್ತಾಯಿಸುತ್ತೇವೆ’’ ಎಂದು ಜಯ ಶಾ ‘ಎಕ್ಸ್’ನಲ್ಲಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News