ಸಿಎಸ್ ಕೆಗೆ ಮಾರಕವಾದ ಡಿಆರ್ ಎಸ್ ನಾಟಕ: ಅಂಪೈರ್ ಜತೆ ಜಡೇಜಾ ವಾಗ್ವಾದ
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉತ್ತಮ ಫಾರ್ಮ್ ನಲ್ಲಿರುವ ಆಟಗಾರರ ಪೈಕಿ ಒಬ್ಬರಾದ ಡೇವಾಲ್ಡ್ ಬ್ರೇವಿಸ್ ಶನಿವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ದೊಡ್ಡ ಡಿಆರ್‌ಎಸ್ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲುಂಗಿ ಎಂಗಿಡಿ ಓವರ್ ನ ಮೊದಲ ಎಸೆತದಲ್ಲೇ ಬ್ರೇವಿಸ್ ಎಲ್ ಬಿಡಬ್ಲ್ಯು ತೀರ್ಪಿಗೆ ಬಲಿಯಾಗಿ ಸೊನ್ನೆ ಸುತ್ತಿದರು. ಆದರೆ ಫೀಲ್ಡ್ ಅಂಪೈರ್ ತಪ್ಪು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕಂಡುಬಂದಿದ್ದರಿಂದ, ಸಿಎಸ್‌ಕೆ ಯುವ ಬ್ಯಾಟರ್ ರಿವ್ಯೂಗೆ ಮನವಿ ಮಾಡಿದರು. ಆದರೆ ರಿವ್ಯೂ ಪಡೆಯಲು ಸಮಯಾವಕಾಶ ಮುಗಿದಿದೆ ಎಂಬ ಉತ್ತರ ಅಧಿಕಾರಿಗಳಿಂದ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಯುವ ಆಟಗಾರ ನಿರಾಸೆಯಿಂದ ವಾಪಸ್ಸಾದರು.
ಅವರ ಪ್ಯಾಡ್ ಗೆ ಚೆಂಡು ಬಡಿದಾಗ ಲೆಗ್ ಸೈಡ್ ನತ್ತ ಚೆಂಡು ಹೊರಳಿರುವುದು ಸ್ಪಷ್ಟವಾಗಿ ಕಂಡುಬಂದಿತ್ತು. ಆದರೆ ಕ್ರೀಸ್ ನಲ್ಲಿದ್ದ ಜತೆ ಆಟಗಾರ ಜಡೇಜಾ ಅವರ ಜತೆ ಚರ್ಚಿಸಿ ಡಿಆರ್‌ಎಸ್ ಗೆ ಮನವಿ ಸಲ್ಲಿಸಲು ಸಮಯ ತೆಗೆದುಕೊಂಡರು. ಆದರೆ ರಿವ್ಯೂ ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಉಭಯ ಆಟಗಾರರು ಅಂಪೈರ್ ಜತೆ ವಾಗ್ವಾದ ನಡೆಸಿರುವುದು ಕಂಡುಬಂತು. ಆದರೆ ರಿವ್ಯೂ ಅವಕಾಶ ಪಡೆಯಲು ಇದ್ದ ಸಮಯಾವಕಾಶ ಮುಗಿದಿದೆ ಎಂದು ಅಂಪೈರ್ ಸ್ಪಷ್ಟಪಡಿಸಿದರು.
ಈ ಎಸೆತದ ರಿಪ್ಲೈ ನೋಡಿದಾಗ ಚೆಂಡು ಲೆಗ್ ಸೈಡ್ ನತ್ತ ಮುಖ ಮಾಡಿದ್ದು ಮತ್ತು ಸ್ಟಂಪ್ ಗಿಂತ ಆಚೆಗೆ ಹೊರಳಿದ್ದು ಕಂಡುಬಂದಿತ್ತು. ಈ ಘಟನೆಯು ಡಿಆರ್‌ಎಸ್ ಟೈಮರ್ ಬಗ್ಗೆ ಪ್ರಶ್ನೆಯನ್ನು ಎತ್ತಿರುವುದು ಮಾತ್ರವಲ್ಲದೇ, ಫೀಲ್ಡ್ ಅಂಪೈರ್ ಮೊದಲು ಔಟ್ ಎಂಬ ತೀರ್ಪು ನೀಡಿರುವ ಬಗ್ಗೆಯೂ ಸಂದೇಹಕ್ಕೆ ಕಾರಣವಾಗಿದೆ.
ಬ್ರೇವಿಸ್ ಡಿಆರ್‌ಎಸ್ ಟೈಮರ್ ಅನ್ನು ಪರದೆಯನ್ನು ನೋಡಲು ಸಾಧ್ಯವಾಗಿರಲಿಲ್ಲ ಹಾಗೂ ಅಂಪೈರ್ ನಿರ್ಧಾರದ ಬಗ್ಗೆ ಜಡೇಜಾ ಜತೆ ಚರ್ಚಿಸಲು ಸಮಯಾವಕಾಶ ಇದೆ ಎಂದು ಭಾವಿಸಿದರು. ಆದರೆ ವಾಸ್ತವವಾಗಿ ಸಮಯ ಮುಗಿತ್ತು. ಈ ನಿರ್ಧಾರ ಗೆಲುವಿನ ಹಾದಿಯಲ್ಲಿದ್ದ ಸಿಎಸ್ ಕೆ ಪಾಲಿಗೆ ಮಾರಕವಾಗಿ ಪರಿಣಮಿಸಿ ಎರಡು ರನ್ ಗಳ ಸೋಲು ಅನುಭವಿಸಿತು.