×
Ad

ದುಲೀಪ್ ಟ್ರೋಫಿ: ಫೈನಲ್‌ ಗೆ ಮಧ್ಯ- ದಕ್ಷಿಣ ವಲಯ

ಸೆಮಿಫೈನಲ್ ನಲ್ಲಿ ಪಶ್ಚಿಮ, ಉತ್ತರ ವಲಯಗಳಿಗೆ ಸೋಲು

Update: 2025-09-07 23:58 IST

Photo Credit: MURALI KUMAR K

ಬೆಂಗಳೂರು, ಸೆ. 7: ದುಲೀಪ್ ಟ್ರೋಫಿ ಫೈನಲ್ನಲ್ಲಿ ದಕ್ಷಿಣ ವಲಯ ಮತ್ತು ಮಧ್ಯ ವಲಯ ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯವು ಗುರುವಾರ ಆರಂಭಗೊಳ್ಳಲಿದೆ.

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನ ಒಂದರಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ರವಿವಾರ ದಕ್ಷಿಣ ವಲಯವು ಉತ್ತರ ವಲಯವನ್ನು ಮೊದಲ ಇನಿಂಗ್ಸ್ ಆಧಾರದಲ್ಲಿ ಸೋಲಿಸಿದರೆ, ಎರಡನೇ ಸೆಮಿಫೈನಲ್ನಲ್ಲಿ ಮಧ್ಯ ವಲಯವು ಪಶ್ಚಿಮ ವಲಯವನ್ನು ಮೊದಲ ಇನಿಂಗ್ಸ್ ಆಧಾರದಲ್ಲಿ ಸೋಲಿಸಿದೆ.

ಸೆಮಿಫೈನಲ್ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವಾದ ರವಿವಾರ, ದಕ್ಷಿಣ ವಲಯದ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕಲು ಉತ್ತರ ವಲಯಕ್ಕೆ 259 ರನ್ ಗಳ ಅಗತ್ಯವಿತ್ತು. ದಕ್ಷಿಣ ವಲಯದ ಮೊದಲ ಇನಿಂಗ್ಸ್ 536 ರನ್ಗಳಿಗೆ ಉತ್ತರವಾಗಿ, ಐದು ವಿಕೆಟ್ಗಳ ನಷ್ಟಕ್ಕೆ 278 ರನ್ ಇದ್ದಲ್ಲಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಉತ್ತರ ವಲಯವು 361 ರನ್ಗಳಿಗೆ ಸರ್ವಪತನ ಕಂಡಿತು.

ಅದು ತನ್ನ ಪ್ರಮುಖ ಬ್ಯಾಟರ್ ಶುಭಮ್ ಖಜೂರಿಯ (128)ರನ್ನು ದಿನದ ಎರಡನೇ ಎಸೆತದಲ್ಲೇ ಕಳೆದುಕೊಂಡಿತು. ಬಳಿಕ, ಸಾಹಿಲ್ ಲೋತ್ರಾ (19) ಮತ್ತು ಮಯಾಂಕ್ ದಗರ್ (31) ಕೊಂಚ ಪ್ರತಿರೋಧ ನೀಡಿದರು. ಆಗ ಆಕಾಶದಲ್ಲಿ ಮೋಡಗಳು ದಟ್ಟೈಸಿದವು.

ಮಳೆ ಬಂದಿದ್ದರೆ ಉತ್ತರ ವಲಯಕ್ಕೆ ಕೊಂಚ ನೆಮ್ಮದಿ ಸಿಗುತ್ತಿತ್ತು. ಆದರೆ, ಹಾಗಾಗಲಿಲ್ಲ.

ಕೇರಳದ ವೇಗಿ ಎಮ್.ಡಿ. ನಿದೀಶ್ ತನ್ನ ಮಾರಕ ಬೌಲಿಂಗ್ನಿಂದ ಲೋತ್ರಾ ಮತ್ತು ದಗರ್ರನ್ನು ಪೆವಿಲಿಯನ್ಗೆ ಕಳುಹಿಸಿದರು.

ಬಳಿಕ, ದಕ್ಷಿಣ ವಲಯವು ತನ್ನ ಎರಡನೇ ಇನಿಂಗ್ಸ್ನಲ್ಲಿ 24.4 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿತು. ಆಗ ಉಭಯ ತಂಡಗಳು ಪಂದ್ಯವನ್ನು ನಿಲ್ಲಿಸಲು ಡ್ರಾದಲ್ಲಿ ಮುಕ್ತಾಯಗೊಳಿಸಲು ಒಪ್ಪಿಕೊಂಡವು.

ಮಧ್ಯವಲಯ ಮೇಲುಗೈ

ಎರಡನೇ ಸೆಮಿಫೈನಲ್ನಲ್ಲಿ, ಪಶ್ಚಿಮ ವಲಯದ ವಿರುದ್ಧ ಮಧ್ಯ ವಲಯವು ಶನಿವಾರವೇ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿತ್ತು. ಆ ಮೂಲಕ ಅದರ ಫೈನಲ್ ಪ್ರವೇಶ ಖಚಿತವಾಗಿತ್ತು. ರವಿವಾರ ಸಾರಾಂಶ್ ಜೈನ್ (63 ಔಟಾಗದೆ) ಮತ್ತು ದೀಪಕ್ ಚಾಹರ್ (33) ಮಧ್ಯ ವಲಯದ ಮೊದಲ ಇನಿಂಗ್ಸ್ ಮೊತ್ತವನ್ನು 600 ರನ್ಗೆ ಒಯ್ದರು.

ಪಶ್ಚಿಮ ವಲಯವು ತನ್ನ ಮೊದಲ ಇನಿಂಗ್ಸ್ನಲ್ಲಿ 438 ರನ್ ಗಳಿಸಿತ್ತು.

ಪಶ್ಚಿಮ ವಲಯವು ತನ್ನ ಎರಡನೇ ಇನಿಂಗ್ಸ್ನಲ್ಲಿ 8 ವಿಕೆಟ್ಗಳ ನಷ್ಟಕ್ಕೆ 216 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 64, ಆರ್ಯ ದೇಸಾಯಿ 35 ಮತ್ತು ತನುಷ್ ಕೋಟ್ಯಾನ್ 40 (ಔಟಾಗದೆ) ರನ್ಗಳನ್ನು ಗಳಿಸಿದರು.

ಮಧ್ಯ ವಲಯದ ಸ್ಪಿನ್ನರ್ ಸಾರಾಂಶ್ ಜೈನ್ 84 ರನ್ಗಳನ್ನು ಕೊಟ್ಟು 5 ವಿಕೆಟ್ಗಳನ್ನು ಉರುಳಿಸಿದರು. ಚಹಾ ವಿರಾಮದ ವೇಳೆಗೆ ಉಭಯ ತಂಡಗಳ ನಾಯಕರು ಪರಸ್ಪರ ಕೈಕುಲುಕಿ ಪಂದ್ಯವನ್ನು ನಿಲ್ಲಿಸಲು ಒಪ್ಪಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News