×
Ad

ಶ್ರೀಲಂಕಾದ ಆಲ್‌ರೌಂಡರ್ ದುನಿತ್ ವೆಲ್ಲಾಲಗೆ ತಂದೆ ನಿಧನ

Update: 2025-09-19 22:02 IST

Source: @iamAhmadhaseeb/X.com

ದುಬೈ, ಸೆ.19: ಶ್ರೀಲಂಕಾದ ಆಲ್‌ರೌಂಡರ್ ದುನಿತ್ ವೆಲ್ಲಾಲಗೆ ಅವರ ತಂದೆ ಸುರಂಗ ವೆಲ್ಲಾಲಗೆ ಗುರುವಾರ ಕೊಲಂಬೊದಲ್ಲಿ ಹಠಾತ್ತನೆ ನಿಧನರಾಗಿದ್ದಾರೆ.

ಶ್ರೀಲಂಕಾ ತಂಡ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಏಶ್ಯಕಪ್‌ನ ‘ಬಿ’ ಗುಂಪಿನ ಪಂದ್ಯವನ್ನಾಡಿದ ದಿನದಂದೇ ಸುರಂಗ ವೆಲ್ಲಾಲಗೆ ಅವರು ಶ್ರೀಲಂಕಾದಲ್ಲಿ ಮೃತಪಟ್ಟಿದ್ದಾರೆ.

ಪಂದ್ಯ ಮುಗಿದ ನಂತರ ಶ್ರೀಲಂಕಾದ ಟೀಮ್ ಮ್ಯಾನೇಜರ್, 22ರ ವಯಸ್ಸಿನ ವೆಲ್ಲಾಲಗೆ ಅವರಿಗೆ ಅವರ ತಂದೆಯ ಸಾವಿನ ಸುದ್ದಿ ತಿಳಿಸಿದರು. ಅವರು ತಕ್ಷಣವೇ ತಂಡವನ್ನು ತೊರೆದು ಸ್ವದೇಶಕ್ಕೆ ವಾಪಸಾಗಿದ್ದಾರೆ.

ವೆಲ್ಲಾಲಗೆ ಅವರು ಏಶ್ಯಕಪ್‌ನ ಇನ್ನುಳಿದ ಪಂದ್ಯಗಳಲ್ಲಿ ಭಾಗವಹಿಸುವುದು ಅನುಮಾನ. ಶ್ರೀಲಂಕಾವು ಇನ್ನೂ ಕನಿಷ್ಠ 3 ಪಂದ್ಯಗಳನ್ನು ಆಡಲಿದೆ. ಸೆ.20ರಂದು ಬಾಂಗ್ಲಾದೇಶ, ಸೆ.23ರಂದು ಪಾಕಿಸ್ತಾನ ಹಾಗೂ ಸೆ.26ರಂದು ಭಾರತ ತಂಡದ ವಿರುದ್ಧ ಆಡಲಿದೆ.

ವೆಲ್ಲಾಲಗೆ ಅಫ್ಘಾನಿಸ್ತಾನ ವಿರುದ್ಧ್ದ ತನ್ನ 5ನೇ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಹಾಗೂ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಆಡಿದ್ದಾರೆ. ಈ ಪಂದ್ಯದಲ್ಲಿ 4 ಓವರ್‌ಗಳಲ್ಲಿ 49 ರನ್ ನೀಡಿದ್ದರು. ನಬಿ ಅವರು ವೆಲ್ಲಾಲಗೆ ಎಸೆದ ಕೊನೆಯ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿದರು.

ಶ್ರೀಲಂಕಾದ ಉದಯೋನ್ಮುಖ ಆಟಗಾರನಾಗಿರುವ ವೆಲ್ಲಾಲಗೆ 31 ಏಕದಿನ ಪಂದ್ಯಗಳನ್ನು ಆಡಿದ್ದು, 2024ರಲ್ಲಿ ಕೊಲಂಬೊದಲ್ಲಿ ಭಾರತ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 27 ರನ್‌ಗೆ 5 ವಿಕೆಟ್‌ಗಳನ್ನು ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು.

ಕ್ರಿಕೆಟ್ ಜಗತ್ತು ದುನಿತ್ ವೆಲ್ಲಾಲಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ತಮ್ಮ ಸಂತಾಪ ವ್ಯಕ್ತಪಡಿಸಿದೆ.

ಅಫ್ಘಾನಿಸ್ತಾನದ ಆಲ್‌ರೌಂಡರ್ ಮುಹಮ್ಮದ್ ನಬಿ ಶ್ರೀಲಂಕಾದ ಸ್ಪಿನ್ನರ್ ವೆಲ್ಲಾಲಗೆ ಅವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತಕ್ಕೊಳಗಾದರು.

ಅಫ್ಘಾನ್ ಕ್ರಿಕೆಟಿನ ಹಿರಿಯ ಆಟಗಾರನಾಗಿರುವ ನಬಿ ಕೇವಲ 22 ಎಸೆತಗಳಲ್ಲಿ 60 ರನ್ ಗಳಿಸಿದ್ದರು. ವೆಲ್ಲಾಲಗೆ ಎಸೆದ ಕೊನೆಯ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಪಂದ್ಯದ ನಂತರ ಪತ್ರಕರ್ತರು ನಬಿ ಅವರಿಗೆ ವೆಲ್ಲಾಲಗೆ ತಂದೆಯ ನಿಧನದ ಸುದ್ದಿಯನ್ನು ತಿಳಿಸಿದರು. ಆಗ ನಬಿ ಅವರು ಆಘಾತ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ತನ್ನ ಸಂತಾಪ ವ್ಯಕ್ತಪಡಿಸಿದರು.

‘‘ತಮ್ಮ ಪ್ರೀತಿಯ ತಂದೆಯನ್ನು ಕಳೆದುಕೊಂಡಿರುವ ದುನಿತ್ ವೆಲ್ಲಾಲಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಸಂತಾಪಗಳು. ಧೈರ್ಯವಾಗಿರಿ ಸಹೋದರ ’’ಎಂದು ಯುವ ಸ್ಪಿನ್ನರ್ ವೆಲ್ಲಾಲಗೆ ಅವರು ತನ್ನ ತಂದೆಯ ಜೊತೆಗಿರುವ ಫೋಟೊದೊಂದಿಗೆ ನಬಿ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News