×
Ad

ರೂಟ್ ಶತಕ, ಕಾರ್ಸ್, ಸ್ಮಿತ್ ಅರ್ಧಶತಕ, ಬುಮ್ರಾಗೆ 5 ವಿಕೆಟ್ ಗೊಂಚಲು

Update: 2025-07-11 22:04 IST

ಜಸ್‌ಪ್ರಿತ್ ಬುಮ್ರಾ | PC : X 

ಲಂಡನ್: ಜೋ ರೂಟ್ ಶತಕ(104 ರನ್, 199 ಎಸೆತ, 10 ಬೌಂಡರಿ), ಬ್ರೆಂಡನ್ ಕಾರ್ಸ್(56 ರನ್, 83 ಎಸೆತ)ಹಾಗೂ ಜೆಮೀ ಸ್ಮಿತ್(51 ರನ್, 56 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ತಂಡದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 387 ರನ್ ಗಳಿಸಿ ಸರ್ವಪತನವಾಗಿದೆ. ಭಾರತದ ಸ್ಟಾರ್ ವೇಗಿ ಜಸ್‌ ಪ್ರಿತ್ ಬುಮ್ರಾ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು.

ಇಂಗ್ಲೆಂಡ್ ತಂಡವು 2ನೇ ದಿನವಾದ ಶುಕ್ರವಾರ 4 ವಿಕೆಟ್‌ ಗಳ ನಷ್ಟಕ್ಕೆ 251 ರನ್‌ ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು.

5ನೇ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿ ಕ್ರೀಸ್‌ನಲ್ಲಿ ನೆಲೆವೂರಿದ್ದ ಬ್ಯಾಟರ್‌ ಗಳಾದ- ಬೆನ್ ಸ್ಟೋಕ್ಸ್(44 ರನ್)ಹಾಗೂ ಜೋ ರೂಟ್(104 ರನ್)ವಿಕೆಟ್‌ ಗಳನ್ನು ಬೇಗನೆ ಉರುಳಿಸಿದ ಸ್ಟಾರ್ ಬೌಲರ್ ಜಸ್‌ ಪ್ರಿತ್ ಬುಮ್ರಾ(5-74) ಅವರು ಭಾರತ ತಂಡಕ್ಕೆ ಪರಿಪೂರ್ಣ ಆರಂಭ ಒದಗಿಸಿದರು. ಆನಂತರ ಕ್ರಿಸ್ ವೋಕ್ಸ್(0)ವಿಕೆಟನ್ನು ಉರುಳಿಸಿ 2ನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್ ಇನಿಂಗ್ಸ್‌ಗೆ ಆಘಾತ ನೀಡಿದರು.

88ನೇ ಓವರ್‌ ನಲ್ಲಿ ಸತತ ಎಸೆತಗಳಲ್ಲಿ ರೂಟ್ ಹಾಗೂ ವೋಕ್ಸ್ ವಿಕೆಟ್‌ ಗಳನ್ನು ಉರುಳಿಸಿ ಹ್ಯಾಟ್ರಿಕ್ ಹಾದಿಯಲ್ಲಿದ್ದ ಬುಮ್ರಾಗೆ ಆಲ್‌ ರೌಂಡರ್ ಬ್ರೆಂಡನ್ ಕಾರ್ಸ್ ಹ್ಯಾಟ್ರಿಕ್ ನಿರಾಕರಿಸಿದರು.

ಬೆಳಗ್ಗಿನ ಅವಧಿಯಲ್ಲಿ ಆತಿಥೇಯ ತಂಡವು 22 ಓವರ್‌ ಗಳಲ್ಲಿ 3 ವಿಕೆಟ್‌ ಗಳನ್ನು ಕಳೆದುಕೊಂಡು 102 ರನ್ ಕಲೆ ಹಾಕಿತು.

ಇಂಗ್ಲೆಂಡ್ ತಂಡವು 271 ರನ್‌ ಗೆ 7ನೇ ವಿಕೆಟ್ ಕಳೆದುಕೊಂಡಾಗ ಇನಿಂಗ್ಸ್ ಆಧರಿಸಿದ ವಿಕೆಟ್‌ ಕೀಪರ್ ಜೆಮೀ ಸ್ಮಿತ್(51 ರನ್, 56 ಎಸೆತ)ಹಾಗೂ ಬ್ರೆಂಡನ್ ಕಾರ್ಸ್ (56 ರನ್, 83 ಎಸೆತ) 8ನೇ ವಿಕೆಟ್‌ಗೆ ಕೇವಲ 114 ಎಸೆತಗಳಲ್ಲಿ 84 ರನ್ ಸೇರಿಸಿದರು.

ಟೀ ವಿರಾಮದ ನಂತರ ಸ್ಮಿತ್ ವಿಕೆಟನ್ನು ಪಡೆದ ಮುಹಮ್ಮದ್ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸಿದರು.

5 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್‌ನಲ್ಲಿ ಕೆ.ಎಲ್.ರಾಹುಲ್‌ರಿಂದ ಜೀವದಾನ ಪಡೆದಿದ್ದ ಸ್ಮಿತ್ ಅವರು ಕೇವಲ 52 ಎಸೆತಗಳಲ್ಲಿ ತನ್ನ 6ನೇ ಟೆಸ್ಟ್ ಅರ್ಧಶತಕ ಪೂರೈಸಿದರು. ಅರ್ಧಶತಕ ಗಳಿಸಿದ್ದಲ್ಲದೆ ಇಂಗ್ಲೆಂಡ್ ಮೊತ್ತವನ್ನು 350ರ ಗಡಿ ದಾಟಿಸಿದರು.

ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸ್ಮಿತ್ ಅವರು 56 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿ ಸಿರಾಜ್ ಎಸೆತವನ್ನು ಕೆಣಕಲು ಹೋಗಿ ವಿಕೆಟ್‌ ಕೀಪರ್ ಧ್ರುವ್ ಜುರೆಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಸ್ಮಿತ್ ನಿರ್ಗಮನದ ನಂತರ ಕಾರ್ಸ್ 77 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ತನ್ನ ಚೊಚ್ಚಲ ಅರ್ಧಶತಕ ಗಳಿಸಿದರು. ಕಾರ್ಸ್‌ರನ್ನು (56 ರನ್, 83 ಎಸೆತ)ಕ್ಲೀನ್‌ಬೌಲ್ಡ್ ಮಾಡಿದ ಮುಹಮ್ಮದ್ ಸಿರಾಜ್(2-85) ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.

ಜೋಫ್ರಾ ಆರ್ಚರ್(4ರನ್)ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಜಸ್‌ ಪ್ರಿತ್ ಬುಮ್ರಾ ಟೆಸ್ಟ್‌ ನಲ್ಲಿ 15ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬುಮ್ರಾ ಮೊದಲ ಬಾರಿ ಈ ಸಾಧನೆ ಮಾಡಿ ಗೌರವ ಮಂಡಳಿಯಲ್ಲಿ ಸ್ಥಾನ ಪಡೆದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಯಶಸ್ವಿ ಪ್ರದರ್ಶನ ನೀಡಿದರೆ, ನಿತೀಶ್ ರೆಡ್ಡಿ(2-62)ಹಾಗೂ ಮುಹಮ್ಮದ್ ಸಿರಾಜ್(2-85)ತಲಾ ಎರಡು ವಿಕೆಟ್‌ ಗಳನ್ನು ಪಡೆದರು. ಎಲ್ಲ ವಿಕೆಟ್‌ ಗಳು ವೇಗದ ಬೌಲರ್‌ ಗಳ ಪಾಲಾದವು.

ಸ್ಕೋರ್ ವಿವರ

ಇಂಗ್ಲೆಂಡ್ ಮೊದಲ ಇನಿಂಗ್ಸ್: 112.3 ಓವರ್‌ ಗಳಲ್ಲಿ 387/10

ಝ್ಯಾಕ್ ಕ್ರಾಲಿ ಸಿ ಪಂತ್ ಬಿ ನಿತೀಶ್ 18

ಬೆನ್ ಡಕೆಟ್ ಸಿ ಪಂತ್ ಬಿ ನಿತೀಶ್ 23

ಓಲಿ ಪೋಪ್ ಸಿ ಸಬ್ ಬಿ ಜಡೇಜ 44

ಜೋ ರೂಟ್ ಬಿ ಬುಮ್ರಾ 104

ಹ್ಯಾರಿ ಬ್ರೂಕ್ ಬಿ ಬುಮ್ರಾ 11

ಬೆನ್ ಸ್ಟೋಕ್ಸ್ ಬಿ ಬುಮ್ರಾ 44

ಜೆಮೀ ಸ್ಮಿತ್ ಸಿ ಸಬ್ ಬಿ ಸಿರಾಜ್ 51

ಕ್ರಿಸ್ ವೋಕ್ಸ್ ಸಿ ಸಬ್ ಬಿ ಬುಮ್ರಾ 0

ಬ್ರೆಂಡನ್ ಕಾರ್ಸ್ ಬಿ ಸಿರಾಜ್ 56

ಜೋಫ್ರಾ ಆರ್ಚರ್ ಬಿ ಬುಮ್ರಾ 4

ಶುಐಬ್ ಬಶೀರ್ ಔಟಾಗದೆ 1

ಇತರ 31

ವಿಕೆಟ್ ಪತನ: 1-43, 2-44, 3-153, 4-172, 5-260,6-271, 7- 271, 8-355, 9-370, 10-387

ಬೌಲಿಂಗ್ ವಿವರ

ಜಸ್‌ ಪ್ರಿತ್ ಬುಮ್ರಾ 27-5-74-5

ಆಕಾಶ್ ದೀಪ್ 23-3-92-0

ಮುಹಮ್ಮದ್ ಸಿರಾಜ್ 23.3-6-85-2

ನಿತೀಶ್ ಕುಮಾರ್ ರೆಡ್ಡಿ 17-0-62-2

ರವೀಂದ್ರ ಜಡೇಜ 12-1-29-1

ವಾಶಿಂಗ್ಟನ್ ಸುಂದರ್ 10-1-21-0

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News