ಅಂಡರ್-19 ವಿಶ್ವಕಪ್ ಟೂರ್ನಿ| ಆಸ್ಟ್ರೇಲಿಯ ವಿರುದ್ಧ ರೋಚಕ ಜಯ: ಇಂಗ್ಲೆಂಡ್ ತಂಡ ಫೈನಲ್‌ಗೆ ಲಗ್ಗೆ
Photo: X/ICC
ಬುಲಾವಯೊ, ಫೆ.3: ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 27 ರನ್ ಅಂತರದಿಂದ ರೋಚಕವಾಗಿ ಮಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
ಫೆ.6ರಂದು ಹರಾರೆಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತ ಅಥವಾ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಮಂಗಳವಾರ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 277 ರನ್ ಗಳಿಸಿತು.
ಗೆಲ್ಲಲು 278 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ತಂಡವು ನಾಯಕ ಒಲಿವೆರ್ ಪೀಕ್ (100 ರನ್, 88 ಎಸೆತ, 10 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟದ ಹೊರತಾಗಿಯೂ 47.3 ಓವರ್‌ಗಳಲ್ಲಿ 250 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆಸ್ಟ್ರೇಲಿಯದ ಪರ ನಿತೇಶ್ ಸ್ಯಾಮುಯೆಲ್(47 ರನ್, 83 ಎಸೆತ)ಹಾಗೂ ಆರ್ಯನ್ ಶರ್ಮಾ(34 ರನ್, 23 ಎಸೆತ)ಒಂದಷ್ಟು ಪ್ರತಿರೋಧ ಒಡ್ಡಿದರು.
ಇಂಗ್ಲೆಂಡ್ ತಂಡದ ಪರವಾಗಿ ಜೇಮ್ಸ್ ಮಿಂಟೊ(2-30), ಸೆಬಾಸ್ಟಿಯನ್ ಮೊರ್ಗನ್(2-33), ರಾಲ್ಫಿ ಅಲ್ಬರ್ಟ್(2-45) ಹಾಗೂ ಮನ್ನಿ ಲುಮ್ಸ್ಡೆನ್(2-55)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು ನಾಯಕ ಥಾಮಸ್ ರೇವ್ ಆಕರ್ಷಕ ಶತಕದ(110 ರನ್, 107 ಎಸೆತ, 14 ಬೌಂಡರಿ, 1 ಸಿಕ್ಸರ್)ಸಹಾಯದಿಂದ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಆರಂಭಿಕ ಆಟಗಾರ ಬೆನ್ ಡಾಕಿನ್ಸ್ರನ್ನು ಕಳೆದುಕೊಂಡ ಇಂಗ್ಲೆಂಡ್ ಕಳಪೆ ಆರಂಭ ಪಡೆಯಿತು. ಆಗ ಜೋಸೆಫ್ ಮೂರ್ಸ್ (25 ರನ್)ಹಾಗೂ ಬೆನ್ ಮಯೆಸ್(24 ರನ್)ಎರಡನೇ ವಿಕೆಟ್‌ಗೆ 54 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಮೂರ್ಸ್ ಹಾಗೂ ಮಯೆಸ್ ಬೆನ್ನುಬೆನ್ನಿಗೆ ಔಟಾದರು. ಆಗ ಕ್ಯಾಲಬ್ ಫಾಲ್ಕನರ್(40 ರನ್, 53 ಎಸೆತ) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 135 ರನ್ ಜೊತೆಯಾಟ ನಡೆಸಿದ ನಾಯಕ ರೀವ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.
ಫರ್ಹಾನ್ ಅಹ್ಮದ್ ಔಟಾಗದೆ 28 ರನ್ ಗಳಿಸಿ ಇಂಗ್ಲೆಂಡ್ ಸ್ಕೋರನ್ನು 277ಕ್ಕೆ ತಲುಪಿಸಿದರು.
ಆಸ್ಟ್ರೇಲಿಯದ ಪರವಾಗಿ ಹೇಡನ್ ಶಿಲ್ಲರ್(2-31)ಹಾಗೂ ನಾದೆನ್ ಕೂರೆ(2-49)ತಲಾ ಎರಡು ವಿಕೆಟ್ಗಳನ್ನು ಪಡೆದರು