ಅಂಡರ್-19 ಕ್ರಿಕೆಟ್ ವಿಶ್ವಕಪ್ ಟೂರ್ನಿ| ನಾಳೆ ಸೆಮಿ ಫೈನಲ್: ಭಾರತ ಕ್ರಿಕೆಟ್ ತಂಡಕ್ಕೆ ಅಫ್ಘಾನಿಸ್ತಾನ ಎದುರಾಳಿ
Photo : IANS
ಹರಾರೆ, ಫೆ.3: ಅಂಡರ್-19 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಈ ತನಕ ಅಜೇಯ ದಾಖಲೆ ಕಾಯ್ದುಕೊಂಡು ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ಬುಧವಾರ ಹರಾರೆ ಸ್ಪೋರ್ಟ್ಸ್ ಕ್ಲಬ ನಡೆಯಲಿರುವ ಎರಡನೇ ಸೆಮಿ ಫೈನಲ್‌ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಸ್ಪರ್ಧಾವಳಿಯ ಇತಿಹಾಸದಲ್ಲಿ ಭಾರತ ತಂಡವು ಅತ್ಯಂತ ಯಶಸ್ವಿ ತಂಡವಾಗಿದ್ದು, 2000, 2008, 2012, 2018, 2022ರಲ್ಲಿ ಒಟ್ಟು ಐದು ಬಾರಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ನಾಲ್ಕು ಬಾರಿ ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿರುವ ಆಸ್ಟ್ರೇಲಿಯ ಎರಡನೇ ಸ್ಥಾನದಲ್ಲಿದೆ.
ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡವನ್ನು ಸುಲಭವಾಗಿ ಸೋಲಿಸಿ ದಾಖಲೆಯ ಆರನೇ ವಿಶ್ವಕಪ್ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಡುವ ಗುರಿ ಇಟ್ಟುಕೊಂಡಿದೆ.
ಭಾರತ ತಂಡವು ಪಂದ್ಯಾವಳಿಯಲ್ಲಿ ಈ ತನಕ ಆಡಿರುವ ಎಲ್ಲ ಐದೂ ಪಂದ್ಯಗಳನ್ನು ಸುಲಭವಾಗಿ ಗೆದ್ದುಕೊಂಡಿದೆ. ಇದರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೂಪರ್ ಸಿಕ್ಸ್ ಹಂತದಲ್ಲಿನ 58 ರನ್ ಅಂತರದ ಗೆಲುವು ಕೂಡ ಸೇರಿದೆ.
ಮತ್ತೊಂದೆಡೆ ಅಫ್ಘಾನಿಸ್ತಾನ ತಂಡ ಕೂಡ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ ಗಮನಾರ್ಹ ಪ್ರದರ್ಶನ ನೀಡಿದೆ. ಶ್ರೀಲಂಕಾ ತಂಡದ ವಿರುದ್ಧ ಮಾತ್ರ ನಾಲ್ಕು ವಿಕೆಟ್‌ಗಳ ಅಂತರದಿಂದ ಸೋತಿದೆ.
ಈಗಿನ ಫಾರ್ಮ್ ಹಾಗೂ ತಂಡದ ಸಾಮರ್ಥ್ಯದ ಆಧಾರದಲ್ಲಿ ಭಾರತವು ನಾಕೌಟ್ ಹಂತಕ್ಕಿಂತ ಮೊದಲು ಮೇಲುಗೈ ಸಾಧಿಸಿದಂತೆ ಕಂಡುಬಂದಿದೆ.
ತಂಡಗಳು
ಭಾರತ: ವೈಭವ್ ಸೂರ್ಯವಂಶಿ, ಆ್ಯರೊನ್ ಜಾರ್ಜ್, ಆಯುಷ್ ಮ್ಹಾತ್ರೆ(ನಾಯಕ), ವಿಹಾನ್ ಮಲ್ಹೋತ್ರಾ, ಅಭಿಜ್ಞಾನ್ ಕುಂಡು, ವೇದಾಂತ್ ತ್ರಿವೇದಿ, ಕನಿಷ್ಕ್ ಚೌಹಾಣ್, ಆರ್.ಎಸ್. ಅಂಬರೀಶ್, ಖಿಲನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್.
ಅಫ್ಘಾನಿಸ್ತಾನ: ಫೈಸಲ್ ಶಿನೊಝಾದಾ, ಖಲೀದ್ ಅಹ್ಮದ್ಝೈ, ಉಸ್ಮಾನ್ ಸಾದತ್, ಉಝೈರುಲ್ಲಾ ನಿಯಾಝೈ, ಮಹಬೂಬ್ ಖಾನ್(ನಾಯಕ), ಅಝೀಝುಲ್ಲಾ ಮಿಯಾಖಿಲ್, ನೂರಿಸ್ತಾನಿ ಉಮರ್ಝೈ, ಅಬ್ದುಲ್ ಅಝೀಝ್, ರೂಹುಲ್ಲಾ ಅರಬ್, ವಹೀದುಲ್ಲಾ ಝದ್ರಾನ್, ಅಖಿಲ್ ಖಾನ್.