ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಅರ್ಧಶತಕ: ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಬಾಬರ್ ಆಝಂ
ಬಾಬರ್ ಆಝಂ , ವಿರಾಟ್ ಕೊಹ್ಲಿ | Photo Credit : PTI
ಲಾಹೋರ್: ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಅರ್ಧಶತಕಗಳನ್ನು ದಾಖಲಿಸಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದ ಪಾಕಿಸ್ತಾನದ ಹಿರಿಯ ಬ್ಯಾಟರ್ ಬಾಬರ್ ಆಝಂ ಇತಿಹಾಸ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ರವಿವಾರ ಲಾಹೋರ್‌ನಲ್ಲಿ ನಡೆದಿದ್ದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಔಟಾಗದೆ 50 ರನ್ ಗಳಿಸಿದ ಆಝಂ ಈ ಸಾಧನೆ ಮಾಡಿದರು. ಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದ ಪಾಕಿಸ್ತಾನವು ಟಿ-20 ವಿಶ್ವಕಪ್ ಟೂರ್ನಿಗಿಂತ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಟಿ-20 ಕ್ರಿಕೆಟ್‌ನಲ್ಲಿ 39ನೇ ಬಾರಿ ಅರ್ಧಶತಕವನ್ನು ಗಳಿಸಿರುವ ಆಝಂ ಅವರು ಕೊಹ್ಲಿ(38 ಅರ್ಧಶತಕ)ದಾಖಲೆಯನ್ನು ಮುರಿದರು.
ಏಕಪಕ್ಷೀಯವಾಗಿ ಸಾಗಿದ ಮೂರನೇ ಟಿ-20 ಪಂದ್ಯದಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿದ ಪಾಕಿಸ್ತಾನ ತಂಡವು ಆಸ್ಟ್ರೇಲಿಯವನ್ನು ಕೇವಲ 96 ರನ್‌ಗೆ ನಿಯಂತ್ರಿಸಿ 111 ರನ್ ಅಂತರದಿಂದ ಜಯಶಾಲಿಯಾಗಿದೆ. 2010 ಹಾಗೂ 2018ರ ನಂತರ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನವು ಮೂರನೇ ಬಾರಿ ಸರಣಿ ಕ್ಲೀನ್‌ಸ್ವೀಪ್‌ಗೈದಿದೆ. ಫೆ.7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್‌ಗಿಂತ ಮೊದಲು ಭರ್ಜರಿ ಪ್ರದರ್ಶನ ನೀಡಿದೆ.
ಸಯೀಮ್ ಅಯ್ಯೂಬ್ 37 ಎಸೆತಗಳಲ್ಲಿ 56 ರನ್ ಗಳಿಸಿದರು. ಆರಂಭಿಕ ವಿಕೆಟ್‌ಗಳು ಪತನಗೊಂಡಾಗ ತಂಡವನ್ನು ಆಧರಿಸಿದ ಬಾಬರ್ ಆಝಂ ಮೂರನೇ ವಿಕೆಟ್‌ಗೆ 69 ರನ್ ಸೇರಿಸಿದರು. ಶಾದಾಬ್ ಖಾನ್ ಕೇವಲ 19 ಎಸೆತಗಳಲ್ಲಿ 46 ರನ್ ಗಳಿಸಿ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದರು. ಪಾಕಿಸ್ತಾನವು ಕೊನೆಯ ಐದು ಓವರ್‌ಗಳಲ್ಲಿ 70 ರನ್ ಕಲೆ ಹಾಕಿ 207 ರನ್ ಗಳಿಸಿತ್ತು.
ಮುಹಮ್ಮದ್ ನವಾಝ್ ಜೀವನಶ್ರೇಷ್ಠ ಬೌಲಿಂಗ್(5-18)ಪ್ರದರ್ಶಿಸಿ ಆಸ್ಟ್ರೇಲಿಯವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ನೆರವಾದರು.
►ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಅರ್ಧಶತಕ ಗಳಿಸಿದ ಆಟಗಾರರು
39-ಬಾಬರ್ ಆಝಂ
38-ವಿರಾಟ್ ಕೊಹ್ಲಿ
32-ರೋಹಿತ್ ಶರ್ಮಾ
30-ಮುಹಮ್ಮದ್ ರಿಝ್ವಾನ್
28-ಡೇವಿಡ್ ವಾರ್ನರ್ ಹಾಗೂ ಜೋಸ್ ಬಟ್ಲರ್