×
Ad

ಐಪಿಎಲ್‌ನಿಂದ ಕಡೆಗಣಿಸಲ್ಪಟ್ಟ ಸ್ಟೀವ್ ಸ್ಮಿತ್ ಪಿಎಸ್ಎಲ್ ತಂಡಕ್ಕೆ ಸೇರ್ಪಡೆ

Update: 2026-02-03 22:11 IST

Photo : Big Bash League X

ಸಿಡ್ನಿ, ಫೆ.3: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ 2026ರ ಆವೃತ್ತಿಯ ನೂತನ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ತಂಡ ಸಿಯಾಲ್ಕೋಟ್ ಸ್ಟಾಲಿಯೊಂಝ್ನೊಂದಿಗೆ ಸಹಿ ಹಾಕಿದ್ದಾರೆ.

ಫ್ರಾಂಚೈಸಿಯು ಮಂಗಳವಾರ ಈ ಸುದ್ದಿಯನ್ನು ದೃಢಪಡಿಸಿದೆ. ವಿದೇಶಿ ಆಟಗಾರರಿಗೆ ರೂಪಿಸಿರುವ ಲೀಗ್‌ನ ಹೊಸ ನಿಯಮಗಳಡಿ ಸ್ಮಿತ್ರೊಂದಿಗೆ ನೇರ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸಿಯಾಲ್ ಕೋಟ್ ತಂಡವು ಇತ್ತೀಚೆಗೆ ಪಿಎಸ್ಎಲ್‌ಗೆ ಸೇರ್ಪಡೆಯಾದ ಎರಡು ಹೊಸ ತಂಡಗಳ ಪೈಕಿ ಒಂದಾಗಿದೆ. ಸ್ಮಿತ್ ಅವರು ಮೊದಲ ಬಾರಿ ಆಡುತ್ತಿರುವ ಸಿಯಾಲ್ಕೋಟ್ ತಂಡದ ಪ್ರಧಾನ ಆಕರ್ಷಣೆಯಾಗುವ ನಿರೀಕ್ಷೆ ಇದೆ.

ಅನುಭವ ಹಾಗೂ ನಾಯಕತ್ವದ ಹಿನ್ನೆಲೆ ಇರುವ ಸ್ಮಿತ್ ಅವರು ಸಿಯಾಲ್ಕೋಟ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್‌ನ ಮಿನಿ ಹರಾಜಿನ ವೇಳೆ ಸ್ಮಿತ್ ಅವರು ಮಾರಾಟವಾಗದೆ ಉಳಿದಿದ್ದರು. ಬಿಗ್ ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ಪರ ಕೊನೆಯ ಬಾರಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು. ಋತುವಿನ ಮಧ್ಯೆ ಸಿಡ್ನಿ ತಂಡವನ್ನು ಸೇರ್ಪಡೆಯಾಗಿದ್ದರೂ ಉತ್ತಮ ಪ್ರದರ್ಶನ ನೀಡಿದ್ದರು.

ಸ್ಮಿತ್ ಕೇವಲ ಆರು ಪಂದ್ಯಗಳಲ್ಲಿ 59.80ರ ಸರಾಸರಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳ ಸಹಿತ ಒಟ್ಟು 299 ರನ್ ಗಳಿಸಿದ್ದಾರೆ. ಬಾಬರ್ ಆಝಂ ಜೊತೆ ಆಡಿದ್ದ ಸ್ಮಿತ್ ಅವರು ಸಿಡ್ನಿ ತಂಡದ ಅಗ್ರ ಸ್ಕೋರರ್ ಆಗಿದ್ದರು. ಸಿಡ್ನಿ ತಂಡವು ಫೈನಲ್‌ಗೆ ತಲುಪುವಲ್ಲಿ ನೆರವಾಗಿದ್ದರು.

2025ರ ಐಪಿಎಲ್‌ನಲ್ಲಿ ಸ್ಮಿತ್ ಹರಾಜಾಗದೆ ಇದ್ದರೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅವರ ದಾಖಲೆ ಗಮನಾರ್ಹವಾಗಿದೆ. ಸ್ಮಿತ್ ಒಟ್ಟು 272 ಟಿ-20 ಪಂದ್ಯಗಳಲ್ಲಿ 32.68ರ ಸರಾಸರಿಯಲ್ಲಿ ಐದು ಶತಕ ಹಾಗೂ 30 ಅರ್ಧಶತಕಗಳ ಸಹಿತ ಒಟ್ಟು 6,242 ರನ್ ಗಳಿಸಿದ್ದಾರೆ.

ಸಿಯಾಲ್ಕೋಟ್ ತಂಡವು ಆಸ್ಟ್ರೇಲಿಯದ ಮಾಜಿ ನಾಯಕ ಟಿಮ್ ಪೈನ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ.

ಮಾರ್ಚ್ 26ರಂದು 2026ರ ಆವೃತ್ತಿಯ ಪಿಎಸ್ಎಲ್ ಋತು ಆರಂಭವಾಗಲಿದೆ. ಸಿಯಾಲ್ಕೋಟ್ ಮೊದಲ ಬಾರಿ ಲೀಗ್‌ನಲ್ಲಿ ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News