Rotterdam ಓಪನ್ ಟೆನಿಸ್ ಟೂರ್ನಿ| ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಅಲಭ್ಯ
ಅಲ್ಕರಾಝ್ Photo : PTI
ಪ್ಯಾರಿಸ್, ಫೆ.3: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಈ ವರ್ಷ ನಡೆಯಲಿರುವ ಎಟಿಪಿ 500 ಟೆನಿಸ್ ಟೂರ್ನಿ ಎಬಿನ್ ಅಂಬ್ರೊ(ರೋಟರ್ಡಮ್)ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ವೃತ್ತಿಜೀವನದಲ್ಲಿ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಸ್ಪೇನ್ ಆಟಗಾರ ಅಲ್ಕರಾಝ್ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.
ಅಲ್ಕರಾಝ್ 2025ರಲ್ಲಿ ರೋಟರ್ಡಮ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಫೈನಲ್ ಪಂದ್ಯದಲ್ಲಿ ಅಲೆಕ್ಸ್ ಡಿ ಮಿನೌರ್ ವಿರುದ್ಧ ಮೂರು ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ನಂತರ ಅಲ್ಕರಾಝ್ ತನ್ನ ಚೊಚ್ಚಲ ಎಟಿಪಿ ಟ್ರೋಫಿ ಗೆದ್ದಿದ್ದರು.
‘‘ಕಾರ್ಲೊಸ್ ಅಲ್ಕರಾಝ್ ರೊಟರ್ಡಮ್ನಲ್ಲಿ ತನ್ನ ಪ್ರಶಸ್ತಿ ಉಳಿಸಿಕೊಳ್ಳಲು ಟೆನಿಸ್ ಅಂಗಣಕ್ಕೆ ಮರಳುವುದಿಲ್ಲ. ಕಳೆದ ಎರಡು ವಾರಗಳಿಂದ ಬಿಡುವಿಲ್ಲದ ಟೆನಿಸ್ ಆಡಿರುವ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಲ್ಕರಾಝ್ ಸಕ್ರಿಯ ಟೆನಿಸ್‌ಗೆ ಮರಳಲು ಇನ್ನಷ್ಟು ಸಮಯದ ಅಗತ್ಯವಿದೆ. ಕಾರ್ಲೊಸ್ ಬೇಗನೆ ಚೇತರಿಸಿಕೊಳ್ಳಲಿ’’ ಎಂದು ಎಬಿಎನ್ ಅಮ್ರೊ ಓಪನ್ನ ಆಯೋಜಕರು ಸೋಮವಾರ ತಿಳಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್‌ನಲ್ಲಿ 10 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು 2-6, 6-2, 6-3, 7-5 ಸೆಟ್ಗಳ ಅಂತರದಿಂದ ಮಣಿಸಿದ ಅಲ್ಕರಾಝ್ ಮೊದಲ ಬಾರಿ ಮೆಲ್ಬರ್ನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.