×
Ad

ಭಾರತದೊಂದಿಗೆ ಆಡಿ, ಇಲ್ಲವೇ ಕಾನೂನು ಕ್ರಮ ಎದುರಿಸಿ : ಪಿಸಿಬಿಗೆ ಐಸಿಸಿ ಎಚ್ಚರಿಕೆ

Update: 2026-02-03 22:16 IST

Photo Credit : @ICCMediaComms

ಹೊಸದಿಲ್ಲಿ, ಫೆ.3: ಭಾರತ ಕ್ರಿಕೆಟ್ ತಂಡ ವಿರುದ್ಧದ ಫೆ.15ರಂದು ನಿಗದಿಯಾಗಿರುವ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿರುವುದಕ್ಕೆ ಸಂಬಂಧಿಸಿದಂತೆ ಟಿ-20 ವಿಶ್ವಕಪ್ ಪ್ರಸಾರಕ ಜಿಯೋಸ್ಟಾರ್‌ನಿಂದ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(ಪಿಸಿಬಿ)ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಎಚ್ಚರಿಕೆ ನೀಡಿದೆ ಎಂದು ಪಿಸಿಬಿ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡವು ಸರಕಾರದ ನಿರ್ದೇಶನಗಳನ್ನು ಅನುಸರಿಸಿ ಕೊಲಂಬೊದಲ್ಲಿ ನಿಗದಿಯಾಗಿರುವ ಭಾರತ ತಂಡದ ವಿರುದ್ಧದ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿತ್ತು. ಆದರೆ ಈ ಕುರಿತು ಐಸಿಸಿಗೆ ಅಧಿಕೃತವಾಗಿ ತಿಳಿಸಿಲ್ಲ.

ಪಾಕಿಸ್ತಾನದ ಸಂಪೂರ್ಣ ವಾರ್ಷಿಕ ಆದಾಯ ಪಾಲು ಸುಮಾರು 35 ಮಿಲಿಯನ್ ಡಾಲರನ್ನು ಐಸಿಸಿ ತಡೆ ಹಿಡಿಯಬಹುದು ಹಾಗೂ ಆ ಮೊತ್ತವನ್ನು ಪ್ರಸಾರಕರಿಗೆ ಪರಿಹಾರ ಮೊತ್ತವಾಗಿ ನೀಡಬಹುದು ಎಂದು ಈ ಹಿಂದೆ ಪಿಟಿಐ ವರದಿ ಮಾಡಿತ್ತು.

ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಕಳೆದ ವಾರ ಪ್ರಧಾನಿ ಶೆಹಬಾಝ್ ಷರೀಫ್ರನ್ನು ಭೇಟಿಯಾಗುವ ಮೊದಲು ಮಂಡಳಿಯ ಕಾನೂನು ತಂಡವನ್ನು ಸಂಪರ್ಕಿಸಿದ್ದರು. ಅಧಿಕಾರಿಗಳು ಈಗ ಗಂಭೀರ ಪರಿಣಾಮಗಳನ್ನು ಎದುರಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಪಾಕಿಸ್ತಾನ ತಂಡವು ಭಾರತ ತಂಡದ ವಿರುದ್ಧ ಆಡದಿದ್ದರೆ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಐಸಿಸಿ ವಿವಾದ ಪರಿಹಾರ ಸಮಿತಿಗೆ(ಡಿಆರ್‌ಸಿ)ಹೋಗುವ ಯಾವುದೇ ಪ್ರಯತ್ನಗಳು ವಿಫಲಗೊಳ್ಳುವ ಸಾಧ್ಯತೆಯಿದೆ ಎಂದು ಪಿಸಿಬಿ ಮೂಲವೊಂದು ತಿಳಿಸಿದೆ.

ಐಸಿಸಿಯ ಡಿಆರ್‌ಸಿ ಒಂದು ಆಂತರಿಕ ಸಮಿತಿಯಾಗಿದ್ದು, ಅದು ತನ್ನದೇ ಮಂಡಳಿ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಮೇಲ್ಮನವಿ ಸ್ವೀಕರಿಸುವುದಿಲ್ಲ.

ಐಸಿಸಿ ತನ್ನ ಎಲ್ಲ ಟೂರ್ನಿಗಳಿಗೆ ಪ್ರಸಾರಕರೊಂದಿಗೆ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದಾಗ ಒಪ್ಪಂದವು ಪಾಕಿಸ್ತಾನ ಹಾಗೂ ಭಾರತದ ಪಂದ್ಯಗಳನ್ನು ಒಳಗೊಂಡಿತ್ತು. ಅದರ ಆಧಾರದ ಮೇಲೆ ಪ್ರಸಾರಕರು ಐಸಿಸಿಗೆ ಹಣ ಪಾವತಿ ಮಾಡಿದ್ದರು. ಒಪ್ಪಂದದ ಪ್ರಕಾರ ನಿಯಮ ಉಲ್ಲಂಘನೆಗಾಗಿ ಪಿಸಿಬಿ ಹಾಗೂ ಐಸಿಸಿಯನ್ನು ನ್ಯಾಯಾಲಯಕ್ಕೆ ಒಯ್ಯುವ ಹಕ್ಕು ಪ್ರಸಾರಕರಿಗೆ ಇರುತ್ತದೆ ಎಂದು ಒಪ್ಪಂದದ ಬಾಧ್ಯತೆಯನ್ನು ವಿವರಿಸುತ್ತಾ ಮೂಲವೊಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News