×
Ad

3ನೇ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ 193 ರನ್ ಗುರಿ ನೀಡಿದ ಇಂಗ್ಲೆಂಡ್

Update: 2025-07-13 21:54 IST

PC : PTI

ಲಾರ್ಡ್ಸ್, ಜು.13: ಹಿರಿಯ ಬ್ಯಾಟರ್‌ ಗಳಾದ ಜೋ ರೂಟ್(40 ರನ್, 96 ಎಸೆತ)ಹಾಗೂ ಬೆನ್ ಸ್ಟೋಕ್ಸ್(ಔಟಾಗದೆ 27, 83 ಎಸೆತ) 5ನೇ ವಿಕೆಟ್‌ಗೆ 67 ರನ್ ಜೊತೆಯಾಟದ ನಡೆಸಿದ ಹೊರತಾಗಿಯೂ ಸ್ಪಿನ್ನರ್ ವಾಶಿಂಗ್ಟನ್ ಸುಂದರ್(4-22) ನೇತೃತ್ವದ ಭಾರತದ ಬೌಲರ್‌ಗಳ ಶಿಸ್ತುಬದ್ದ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 3ನೇ ಟೆಸ್ಟ್ ಪಂದ್ಯದಲ್ಲಿ ತನ್ನ 2ನೇ ಇನಿಂಗ್ಸ್‌ನಲ್ಲಿ 62.1 ಓವರ್‌ಗಳಲ್ಲಿ 192 ರನ್ ಗಳಿಸಿ ಆಲೌಟಾಗಿದೆ. ಶುಭಮನ್ ಗಿಲ್ ಬಳಗದ ಗೆಲುವಿಗೆ 193 ರನ್ ಗುರಿ ನೀಡಿದೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 4ನೇ ದಿನದಾಟವಾದ ರವಿವಾರ ಸುಂದರ್ ಪ್ರಮುಖ ಆಟಗಾರ ಜೋ ರೂಟ್ ವಿಕೆಟ್ ಪಡೆದು ಇಂಗ್ಲೆಂಡ್‌ನ 5ನೇ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು. 4 ಓವರ್‌ಗಳ ನಂತರ ಅದ್ಭುತ ವೇಗದ ಎಸೆತದ ಮೂಲಕ ಸ್ಮಿತ್‌ರನ್ನು ಕೇವಲ 8 ರನ್‌ಗೆ ಔಟ್ ಮಾಡಿದರು. ಟೀ ವಿರಾಮದ ನಂತರ ನಾಯಕ ಬೆನ್ ಸ್ಟೋಕ್ಸ್(33 ರನ್,96 ಎಸೆತ)ಕ್ಲೀನ್‌ಬೌಲ್ಡ್ ಮಾಡಿ ಇಂಗ್ಲೆಂಡ್‌ಗೆ ಮರ್ಮಾಘಾತ ನೀಡಿದರು. ಬಶೀರ್ (2)ವಿಕೆಟ್ ಪಡೆದು ಇಂಗ್ಲೆಂಡ್‌ನ 2ನೇ ಇನಿಂಗ್ಸ್‌ಗೆ ತೆರೆ ಎಳೆದರು. ಸುಂದರ್ ಎಲ್ಲ 4 ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ವಿಶೇಷ.

ಭಾರತ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 387 ರನ್ ಗಳಿಸಿದ ಕಾರಣ ಇಂಗ್ಲೆಂಡ್ ತಂಡವು ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ವಿಫಲವಾಗಿತ್ತು.

ಇಂಗ್ಲೆಂಡ್ ತಂಡವು ವಿಕೆಟ್ ನಷ್ಟವಿಲ್ಲದೆ 2 ರನ್‌ನಿಂದ 4ನೇ ದಿನದಾಟ ಆರಂಭಿಸಿತು. ಆರಂಭಿಕ ಬ್ಯಾಟರ್‌ಗಳಾದ ಝ್ಯಾಕ್ ಕ್ರಾಲಿ(22 ರನ್, 49 ಎಸೆತ)ಹಾಗೂ ಬೆನ್ ಡಕೆಟ್(12 ರನ್, 12 ಎಸೆತ)ಮೊದಲ ವಿಕೆಟ್‌ನಲ್ಲಿ ಕೇವಲ 22 ರನ್ ಸೇರಿಸಿದರು. ಬಿಗಿಯಾದ ಆರಂಭಿಕ ಸ್ಪೆಲ್ ಮೂಲಕ ಡಕೆಟ್ ಹಾಗೂ ಓಲಿ ಪೋಪ್ ವಿಕೆಟನ್ನು ಪಡೆದ ಮುಹಮ್ಮದ್ ಸಿರಾಜ್ ಭಾರತಕ್ಕೆ ಮೇಲುಗೈ ಒದಗಿಸಿದರು. ಡಕೆಟ್ ಅವರು ಮುಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಬುಮ್ರಾಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಡಕೆಟ್ ವಿಕೆಟನ್ನು ಪಡೆದ ಸಿರಾಜ್ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಆಚರಿಸಿದರು.

3ನೇ ಕ್ರಮಾಂಕದ ಬ್ಯಾಟರ್ ಓಲಿ ಪೋಪ್ ಕೇವಲ 4 ರನ್ ಗಳಿಸಿ ಮುಹಮ್ಮದ್ ಸಿರಾಜ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಕ್ರಾಲಿ 22 ರನ್ ಗಳಿಸಿ ನಿತೀಶ್ ರೆಡ್ಡಿಗೆ ಸತತ 2ನೇ ಬಾರಿ ವಿಕೆಟ್ ಒಪ್ಪಿಸಿದರು. ಆಗ ಇಂಗ್ಲೆಂಡ್ 50 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತು.

ರೂಟ್ ಹಾಗೂ ಬ್ರೂಕ್ 4ನೇ ವಿಕೆಟ್‌ಗೆ 41 ಎಸೆತಗಳಲ್ಲಿ 37 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಬ್ರೂಕ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ ಆಕಾಶ್ ದೀಪ್ ಆಂಗ್ಲರಿಗೆ ಆಘಾತ ನೀಡಿದರು. ಲಂಚ್ ವಿರಾಮದ ವೇಳೆಗೆ ಇಂಗ್ಲೆಂಡ್ 4 ವಿಕೆಟ್‌ಗಳ ನಷ್ಟಕ್ಕೆ 98 ರನ್ ಗಳಿಸಿತ್ತು.

ಆಗ ರೂಟ್‌ಗೆ ಜೊತೆಯಾದ ಸ್ಟೋಕ್ಸ್ 5ನೇ ವಿಕೆಟ್‌ನಲ್ಲಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಕೇವಲ 1 ಬೌಂಡರಿ ಗಳಿಸಿ ತಾಳ್ಮೆಯ ಇನಿಂಗ್ಸ್ ಆಡಿದ ರೂಟ್‌ಗೆ ಆಫ್ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು.

ರೂಟ್ ಔಟಾದ ಬೆನ್ನಿಗೆ ಫಾರ್ಮ್‌ನಲ್ಲಿರುವ ವಿಕೆಟ್‌ಕೀಪರ್ ಬ್ಯಾಟರ್ ಜೇಮಿ ಸ್ಮಿತ್(8 ರನ್)ಸುಂದರ್‌ಗೆ ಕ್ಲೀನ್‌ಬೌಲ್ಡಾದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ವಾಶಿಂಗ್ಟನ್ ಸುಂದರ್(3-22)ಯಶಸ್ವಿ ಪ್ರದರ್ಶನ ನೀಡಿದರು. ಮುಹಮ್ಮದ್ ಸಿರಾಜ್(2-31)ಹಾಗೂ ಜಸ್‌ಪ್ರಿತ್ ಬುಮ್ರಾ(2-37)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ನಿತೀಶ್ ರೆಡ್ಡಿ(1-20)ಹಾಗೂ ಆಕಾಶ್ ದೀಪ್(1-30)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News