×
Ad

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ | ನಿಸ್ಸಾಂಕ ಶತಕ, ಶ್ರೀಲಂಕಾ ಜಯಭೇರಿ

Update: 2024-09-09 22:32 IST

PC : NDTV

ದಿ ಓವಲ್ : ನಾಲ್ಕನೇ ದಿನದಾಟದಲ್ಲಿ 219 ರನ್ ಗುರಿಯನ್ನು ಸುಲಭವಾಗಿ ತಲುಪಿದ ಶ್ರೀಲಂಕಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಅಪರೂಪದ ಟೆಸ್ಟ್ ಗೆಲುವು ದಾಖಲಿಸಿದೆ. ಈ ಮೂಲಕ ಕ್ಲೀನ್‌ಸ್ವೀಪ್‌ನಿಂದ ಪಾರಾಗಿದೆ.

ಔಟಾಗದೆ 127 ರನ್(124 ಎಸೆತ, 13 ಬೌಂಡರಿ, 2 ಸಿಕ್ಸರ್) ಗಳಿಸಿದ ಪಥುಮ್ ನಿಸ್ಸಾಂಕ ಶ್ರೀಲಂಕಾ ತಂಡ 3 ಪಂದ್ಯಗಳ ಸರಣಿಯಲ್ಲಿ ಸಮಾಧಾನಕರ ಗೆಲುವು ದಾಖಲಿಸಲು ನೆರವಾದರು. ಇಂಗ್ಲೆಂಡ್ ತಂಡ ಮೊದಲೆರಡು ಪಂದ್ಯಗಳನ್ನು ಜಯಿಸಿ 2-0 ಮುನ್ನಡೆ ಸಾಧಿಸಿ ಈಗಾಗಲೇ ಸರಣಿ ಗೆದ್ದುಕೊಂಡಿದೆ.

ಶ್ರೀಲಂಕಾ ತಂಡವು ಸೋಮವಾರ 1 ವಿಕೆಟ್ ನಷ್ಟಕ್ಕೆ 94 ರನ್‌ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿತು. ಗೆಲ್ಲಲು ಇನ್ನೂ 125 ರನ್ ಅಗತ್ಯವಿತ್ತು. ಲಂಕನ್ನರು ಕೇವಲ ಎರಡು ಗಂಟೆಯೊಳಗೆ ಗೆಲುವಿನ ದಡ ಸೇರಿದರು. 2 ವಿಕೆಟ್‌ಗಳ ನಷ್ಟಕ್ಕೆ 219 ರನ್ ಗಳಿಸುವ ಮೂಲಕ ಎಂಟು ವಿಕೆಟ್ ಅಂತರದಿಂದ ಭರ್ಜರಿ ಜಯ ಸಾಧಿಸಿದರು.

ಶ್ರೀಲಂಕಾ ತಂಡ 40 ವರ್ಷಗಳಲ್ಲಿ ಇಂಗ್ಲೆಂಡ್ ವಿರುದ್ಧ ಆಡಿರುವ 21 ಟೆಸ್ಟ್ ಪಂದ್ಯಗಳಲ್ಲಿ ತನ್ನ ನಾಲ್ಕನೇ ಗೆಲುವು ದಾಖಲಿಸಿತು. ಸರಿಯಾಗಿ 10 ವರ್ಷಗಳ ಹಿಂದೆ ಎರಡು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಜಯಿಸಿತ್ತು.

ರವಿವಾರ ಸಂಜೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಪಂದ್ಯ ಗೆಲ್ಲುವ ಉತ್ತಮ ಸ್ಥಿತಿಯಲ್ಲಿತ್ತು. ಆರಂಭಿಕ ವಿಕೆಟ್‌ಗಳು ಉರುಳಿದರೆ ಪಂದ್ಯ ಗೆಲ್ಲಬಹುದು ಎಂದು ಕೆಲವು ಇಂಗ್ಲೆಂಡ್ ಅಭಿಮಾನಿಗಳು ಆತ್ಮವಿಶ್ವಾಸದಲ್ಲಿದ್ದರು.

ಅಟ್ಕಿಸನ್ ಬೌಲಿಂಗ್‌ನಲ್ಲಿ ಶುಐಬ್ ಬಶೀರ್ ಅವರ ಆಕರ್ಷಕ ರನ್ನಿಂಗ್ ಕ್ಯಾಚ್‌ಗೆ ಔಟಾಗುವ ಮೊದಲು ಕುಸಲ್ ಮೆಂಡಿಸ್ ರವಿವಾರದ 30 ರನ್‌ಗೆ ಇನ್ನೂ 9 ರನ್ ಗಳಿಸಿದರು.

ರವಿವಾರ ಕ್ಷಿಪ್ರವಾಗಿ ಔಟಾಗದೆ 53 ರನ್ ಗಳಿಸಿದ್ದ ನಿಸ್ಸಾಂಕ, 107 ಎಸೆತಗಳಲ್ಲಿ ತನ್ನ ಎರಡನೇ ಟೆಸ್ಟ್ ಶತಕ ಪೂರೈಸಿದರು. ಔಟಾಗದೆ 32 ರನ್ ಗಳಿಸಿದ ಅ್ಯಂಜೆಲೊ ಮ್ಯಾಥ್ಯೂಸ್ ಅವರು ನಿಸ್ಸಾಂಕಗೆ ಸಾಥ್ ನೀಡಿದರು.

ವೆಸ್ಟ್‌ಇಂಡೀಸ್ ವಿರುದ್ಧ 3-0 ಕ್ಲೀನ್‌ಸ್ವೀಪ್ ಹಾಗೂ ಶ್ರೀಲಂಕಾ ವಿರುದ್ಧ ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಇಂಗ್ಲೆಂಡ್ ತಂಡ ಎಲ್ಲ 6 ಪಂದ್ಯಗಳನ್ನು ಗೆಲ್ಲುವ ವಿಶ್ವಾಸದಲ್ಲಿತ್ತು.

ಆಂಗ್ಲರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿದ್ದಾಗ ಸತತ ಮೂರನೇ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ 325 ರನ್‌ಗೆ ಕುಸಿದ ನಂತರ ಶ್ರೀಲಂಕಾಕ್ಕೆ ಅವಕಾಶದ ಬಾಗಿಲು ತೆರೆಯಿತು.

ಶ್ರೀಲಂಕನ್ನರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಕೇವಲ 263 ರನ್ ಗಳಿಸಿ ಪರದಾಟ ನಡೆಸಿದಂತೆ ಕಂಡುಬಂದರು. ಆದರೆ, ರವಿವಾರ ಇಂಗ್ಲೆಂಡ್ ತಂಡವನ್ನು 34 ಓವರ್‌ಗಳಲ್ಲಿ 156 ರನ್‌ಗೆ ಆಲೌಟ್ ಮಾಡಿ ಪ್ರಬಲ ಪ್ರತಿರೋಧ ಒಡ್ಡಿದರು.

ಇಂಗ್ಲೆಂಡ್ ತಂಡ ಇದೀಗ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ ಕ್ರಿಕೆಟ್‌ನತ್ತ ಗಮನಹರಿಸಲಿದೆ. ಬುಧವಾರದಿಂದ ಟಿ20 ಪಂದ್ಯದೊಂದಿಗೆ ಸರಣಿಯು ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್: 325 ರನ್

ಶ್ರೀಲಂಕಾ ಮೊದಲ ಇನಿಂಗ್ಸ್: 263 ರನ್

ಇಂಗ್ಲೆಂಡ್ ಎರಡನೇ ಇನಿಂಗ್ಸ್: 156 ರನ್

ಶ್ರೀಲಂಕಾ ಎರಡನೇ ಇನಿಂಗ್ಸ್: 219/2

(ಪಥುಮ್ ನಿಸ್ಸಾಂಕ ಔಟಾಗದೆ 127, ಕುಸಾಲ್ ಮೆಂಡಿಸ್ 39, ಮ್ಯಾಥ್ಯೂ ಔಟಾಗದೆ 32)

ಪಂದ್ಯಶ್ರೇಷ್ಠ: ಪಥುಮ್ ನಿಸ್ಸಾಂಕ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News