×
Ad

3ನೇ ಏಕದಿನ: ಇಂಗ್ಲೆಂಡ್‌ ಗೆ 342 ರನ್ ಗಳ ಭರ್ಜರಿ ಜಯ, ಸರಣಿ ಗೆದ್ದ ದಕ್ಷಿಣ ಆಫ್ರಿಕಾ

ಬೆಥೆಲ್, ರೂಟ್ ಶತಕ, ಆರ್ಚರ್ ಅಮೋಘ ಬೌಲಿಂಗ್

Update: 2025-09-08 21:54 IST

PC : NDTV 

ಸೌತಾಂಪ್ಟನ್, ಸೆ.8: ಆತಿಥೇಯ ಇಂಗ್ಲೆಂಡ್ ತಂಡವು 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 342 ರನ್‌ಗಳ ಅಂತರದಿಂದ ಮಣಿಸಿತು. ಏಕದಿನ ಇತಿಹಾಸದಲ್ಲಿ ಅತಿ ದೊಡ್ಡ ರನ್ ಅಂತರದ ಗೆಲುವು ದಾಖಲಿಸಿತು.

ರವಿವಾರ ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು ಜೇಕಬ್ ಬೆಥೆಲ್(110 ರನ್, 82 ಎಸೆತ, 13 ಬೌಂಡರಿ, 3 ಸಿಕ್ಸರ್ ) ಹಾಗೂ ಜೋ ರೂಟ್ (100 ರನ್, 96 ಎಸೆತ, 6 ಬೌಂಡರಿ) ಶತಕಗಳ ಕೊಡುಗೆಯ ಸಹಾಯದಿಂದ ನಿಗದಿತ 50 ಓವರ್‌ ಗಳಲ್ಲಿ 5 ವಿಕೆಟ್‌ ಗಳ ನಷ್ಟಕ್ಕೆ 414 ರನ್ ಕಲೆ ಹಾಕಿತು.

ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಲು 415 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಜೋಫ್ರಾ ಆರ್ಚರ್(4-18) , ಆದಿಲ್ ರಶೀದ್(3-13) ಹಾಗೂ ಬ್ರೆಂಡನ್ ಕಾರ್ಸ್ (2-33) ಅವರ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿ 20.5 ಓವರ್‌ ಗಳಲ್ಲಿ ಕೇವಲ 72 ರನ್‌ಗೆ ಗಂಟುಮೂಟೆ ಕಟ್ಟಿತು. ಈ ಹಿಂದೆ 1993ರಲ್ಲಿ ಆಸ್ಟ್ರೇಲಿಯದ ವಿರುದ್ಧ ಅತ್ಯಂತ ಕನಿಷ್ಠ ಸ್ಕೋರ್(69)ಗಳಿಸಿತ್ತು.

ಇಂಗ್ಲೆಂಡ್ ತಂಡವು ಈ ಹಿಂದೆ 2018ರಲ್ಲಿ ಟ್ರೆಂಟ್‌ ಬ್ರಿಡ್ಜ್‌ ನಲ್ಲಿ ಆಸ್ಟ್ರೇಲಿಯದ ವಿರುದ್ಧ 242 ರನ್ ಅಂತರದಿಂದ ಭರ್ಜರಿ ಗೆಲುವು ಪಡೆದಿತ್ತು.

2023ರಲ್ಲಿ ಭಾರತ ತಂಡವು ಶ್ರೀಲಂಕಾದ ವಿರುದ್ಧ 317 ರನ್ ಅಂತರದಿಂದ ಜಯ ಸಾಧಿಸಿದ್ದು, ಇದು ಏಕದಿನ ಕ್ರಿಕೆಟ್‌ ನಲ್ಲಿ 2ನೇ ಅತಿದೊಡ್ಡ ರನ್ ಅಂತರದ ಜಯವಾಗಿದೆ.

ಆರ್ಚರ್ ಅವರು ದಕ್ಷಿಣ ಆಫ್ರಿಕಾದ ಅಗ್ರ ಐವರು ಬ್ಯಾಟರ್‌ಗಳ ಪೈಕಿ ನಾಲ್ವರನ್ನು ಪೆವಿಲಿಯನ್‌ ಗೆ ಕಳುಹಿಸಿದರು. ಆದಿಲ್ ರಶೀದ್ ಹರಿಣ ಪಡೆಯ ಬಾಲ ಕತ್ತರಿಸಿದರು.

ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್ ಹಾಗೂ 2ನೇ ಪಂದ್ಯದಲ್ಲಿ 5 ರನ್‌ನಿಂದ ಸೋಲನುಭವಿಸಿ ಈಗಾಗಲೇ ಸರಣಿಯನ್ನು ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡವು ಕೊನೆಯ ಪಂದ್ಯದಲ್ಲಿ ದಾಖಲೆಯ ಪ್ರದರ್ಶನ ನೀಡಿ ಸಮಾಧಾನಕರ ಗೆಲುವು ಪಡೆದಿದೆ.

ಏಕದಿನ ಕ್ರಿಕೆಟ್‌ ನಲ್ಲಿ ಐದನೇ ಗರಿಷ್ಠ ಮೊತ್ತ(414)ಕಲೆ ಹಾಕಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿತು. ಜೋಸ್ ಬಟ್ಲರ್ ಔಟಾಗದೆ 62 ರನ್ ಹಾಗೂ ಆರಂಭಿಕ ಬ್ಯಾಟರ್ ಜೆಮೀ ಸ್ಮಿತ್ 62 ರನ್ ಗಳಿಸಿ ಇಂಗ್ಲೆಂಡ್ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

ಶತಕವೀರ ಬೆಥೆಲ್ ಅವರ 82 ಎಸೆತಗಳ ಅಮೋಘ ಇನಿಂಗ್ಸ್‌ ನಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ ಗಳನ್ನು ಸಿಡಿಸಿದರು. ಮೊದಲ ಪಂದ್ಯದಲ್ಲಿ 1 ರನ್ ಹಾಗೂ 2ನೇ ಪಂದ್ಯದಲ್ಲಿ 58 ರನ್ ಗಳಿಸರುವ ಬೆಥೆಲ್ ರವಿವಾರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಗೆಲ್ಲಲು ಕಠಿಣ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವು 18 ರನ್‌ಗೆ 5 ವಿಕೆಟ್‌ ಗಳನ್ನು ಕಳೆದುಕೊಂಡು ಭಾರೀ ಕುಸಿತ ಕಂಡಿತು. ಆ ನಂತರ ಅದು ಚೇತರಿಸಿಕೊಳ್ಳಲಿಲ್ಲ. ಕಾರ್ಬಿನ್ ಬಾಷ್(20 ರನ್) ಸರ್ವಾಧಿಕ ಸ್ಕೋರ್ ಗಳಿಸಿದರು. ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಗಾಯದಿಂದಾಗಿ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ 9 ಆಟಗಾರರು ಆಡಿದರು.

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಬುಧವಾರದಿಂದ ಟಿ-20 ಸರಣಿಯನ್ನು ಆಡಲಿವೆ.

*ಏಕದಿನ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಅಂತರದ ಗೆಲುವು

342 ರನ್- ಇಂಗ್ಲೆಂಡ್-ದಕ್ಷಿಣ ಆಫ್ರಿಕಾ(2025)

317 ರನ್-ಭಾರತ-ಶ್ರೀಲಂಕಾ(2023)

309 ರನ್-ಆಸ್ಟ್ರೇಲಿಯ-ನೆದರ್‌ಲ್ಯಾಂಡ್ಸ್(2023)

304 ರನ್-ಝಿಂಬಾಬ್ವೆ-ಯುಎಸ್‌ಎ(2023)

302 ರನ್-ಭಾರತ-ಶ್ರೀಲಂಕಾ(2023)

290 ರನ್-ನ್ಯೂಝಿಲ್ಯಾಂಡ್-ಐರ್‌ಲ್ಯಾಂಡ್(2008)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News