ನಮಗೆ ಮುಂದಿನ ಪ್ರತಿ ಪಂದ್ಯವೂ ಸೆಮಿ ಫೈನಲ್: ಆರ್ ಸಿ ಬಿ ಕೋಚ್ ಆ್ಯಂಡಿ ಫ್ಲವರ್
ಆ್ಯಂಡಿ ಫ್ಲವರ್ | PC : NDTV
ಹೊಸದಿಲ್ಲಿ: ನಮ್ಮ ತಂಡದ ಪಾಲಿಗೆ ಮುಂಬರುವ 7 ಐಪಿಎಲ್ ಪಂದ್ಯಗಳೂ ಸೆಮಿ ಫೈನಲ್ ಇದ್ದಂತೆ ಎಂದು ಪ್ರಸಕ್ತ ಐಪಿಎಲ್ ನಲ್ಲಿ ಆಡಿರುವ 7 ಪಂದ್ಯಗಳಲ್ಲಿ ಆರನೇ ಸೋಲು ಕಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ನಡೆದಿದ್ದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ ಸಿ ಬಿ ತಂಡ 25 ರನ್ಗಳಿಂದ ಸೋತಿತ್ತು. ಈ ಸೋಲು ಆರ್ ಸಿ ಬಿ ಯ ಪ್ಲೇ ಆಫ್ ಸುತ್ತಿಗೇರುವ ವಿಶ್ವಾಸಕ್ಕೆ ಧಕ್ಕೆ ತಂದಿದೆ.
ಇದು ನಿಸ್ಸಂಶಯವಾಗಿ ನಾಕೌಟ್ ಸಮಯ. ಪ್ರತಿಯೊಂದು ಪಂದ್ಯವೂ ನಮಗೆ ಈಗ ಸೆಮಿ ಫೈನಲ್ ನಂತಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಫ್ಲವರ್ ಅಭಿಪ್ರಾಯಪಟ್ಟರು.
ಆರ್ ಸಿ ಬಿ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತವನ್ನು(287/3)ಎದುರಾಳಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಹೈದರಾಬಾದ್ ಬ್ಯಾಟರ್ಗಳು ದಿಕ್ಕೆಟ್ಟ ಆರ್ ಸಿ ಬಿ ಬೌಲರ್ಗಳ ಮೇಲೆ ಸವಾರಿ ಮಾಡಿದರು.
ಸೋಮವಾರ ರಾತ್ರಿ ನಮ್ಮ ತಂಡ ನಿಜಕ್ಕೂ ಕಠಿಣ ಸವಾಲು ಎದುರಿಸಿತ್ತು. ಹೈದರಾಬಾದ್ ತಂಡ ದೊಡ್ಡ ಮೊತ್ತ ಗಳಿಸಿದ ಕಾರಣ ಪಂದ್ಯವು ನಮ್ಮ ಕೈಯಿಂದ ಜಾರಿತು. ನಮ್ಮ ತಂಡ ಬ್ಯಾಟಿಂಗ್ ನಲ್ಲಿ ನೀಡಿರುವ ಹೋರಾಟ ನನಗೆ ನಿಜವಾಗಿಯೂ ಹೆಮ್ಮೆ ತಂದಿದೆ. ನಾವು ಪಂದ್ಯವನ್ನು ಸೋತಿದ್ದರೂ ಕೂಡ ಹೋರಾಟ ನೀಡಿರುವುದಕ್ಕೆ ನನಗೆ ನಿಜವಾಗಿಯೂ ಹೆಮ್ಮೆ ಇದೆ ಎಂದು ಫ್ಲವರ್ ಹೇಳಿದ್ದಾರೆ.
ಆರ್ ಸಿ ಬಿ ತಂಡ ರನ್ ಚೇಸ್ ಮಾಡುತ್ತಿದ್ದಾಗ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಹಾಗೂ ನಾಯಕ ಎಫ್ಡು ಪ್ಲೆಸಿಸ್ 28 ಎಸೆತಗಳಲ್ಲಿ 62 ರನ್ ಗಳಿಸಿದ್ದರು.
ಹೈದರಾಬಾದ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಕಾರ್ತಿಕ್ರನ್ನು ಕೊಂಡಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕೋಚ್ ಫ್ಲವರ್, ಭಾರತದ ಟಿ20 ವಿಶ್ವಕಪ್ ತಂಡಕ್ಕೆ ವಿಕೆಟ್ಕೀಪರ್-ಬ್ಯಾಟರ್ ಕಾರ್ತಿಕ್ ಸ್ಥಾನ ಗಿಟ್ಟಿಸಿಕೊಂಡರೆ ಯಾವುದೇ ಅಚ್ಚರಿ ಇಲ್ಲ ಎಂದು ಹೇಳಿದರು.
ಆರ್ ಸಿ ಬಿ ತಂಡ ಎಪ್ರಿಲ್ 21ರಂದು ಕೋಲ್ಕತಾದ ಈಡನ್ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸವಾಲು ಎದುರಿಸಲಿದೆ.