FIFA World Cup 2026 | 6ನೇ ವಿಶ್ವಕಪ್ ಗೆಲ್ಲುವತ್ತ ಬ್ರೆಝಿಲ್ ಚಿತ್ತ; ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ಮೆಕ್ಸಿಕೊ
ಮೆಕ್ಸಿಕೊ ತಂಡ | Photo : x@miseleccionmxEN
ನ್ಯೂಯಾರ್ಕ್, ಜೂ. 8: ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ಜೂನ್ 11ರಿಂದ ಆರಂಭವಾಗಲಿದೆ. ಮೆಕ್ಸಿಕೊ ಸಿಟಿಯ ಎಸ್ಟಾಡಿಯೊ ಅಜ್ಟೆಕಾ ಕ್ರೀಡಾಂಗಣವು ಜೂ. 11ರಂದು ಆರಂಭಿಕ ಪಂದ್ಯದ ಆತಿಥ್ಯ ವಹಿಸಲಿದೆ. ಆತಿಥೇಯ ಮೆಕ್ಸಿಕೊ ತಂಡವು ಉದ್ಘಾಟನಾ ಪಂದ್ಯದಲ್ಲಿ 2010ರ ವಿಶ್ವಕಪ್ ಆತಿಥ್ಯ ವಹಿಸಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
2002ರಲ್ಲಿ ಐದನೇ ಬಾರಿ ವಿಶ್ವಕಪ್ ಜಯಿಸಿದ್ದ ಬ್ರೆಝಿಲ್ ತಂಡವು ಈ ಬಾರಿ ದಾಖಲೆಯ ಆರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
40 ವರ್ಷಗಳ ನಂತರ ವಿಶ್ವದ ಅತಿದೊಡ್ಡ ಕ್ರೀಡಾಹಬ್ಬವು ಮೆಕ್ಸಿಕೊದಲ್ಲಿ ನಡೆಯುತ್ತಿದೆ. ಮೆಕ್ಸಿಕೊ ದೇಶವು 1986ರಲ್ಲಿ ಮೊದಲ ಬಾರಿ ವಿಶ್ವಕಪ್ ಆಯೋಜಿಸಿತ್ತು. ಮೆಕ್ಸಿಕೊ ತಂಡವು 1970 ಹಾಗೂ 1986ರ ವಿಶ್ವಕಪ್‌ಗಳಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ಈ ಬಾರಿ ತವರು ನೆಲದಲ್ಲಿ ಮತ್ತೊಮ್ಮೆ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿದೆ. ಮೆಕ್ಸಿಕೊ ತಂಡವು 1994ರಿಂದ ಪ್ರತಿಯೊಂದು ವಿಶ್ವಕಪ್ ಟೂರ್ನಿಯಲ್ಲೂ ಆಡಿದೆ. ‘ಎ’ ಗುಂಪಿನಲ್ಲಿರುವ ತಂಡಗಳ ಪೈಕಿ ಗರಿಷ್ಠ ರ‍್ಯಾಂಕಿಂಗ್ (15) ಹೊಂದಿರುವ ತಂಡವಾಗಿದೆ.
ಮೆಕ್ಸಿಕೊ ತಂಡದಲ್ಲಿ ಸ್ಯಾಂಟಿಯಾಗೊ ಗಿಮೆನೆಝ್, ರವೂಲ್ ಜಿಮೆನೆಝ್, ಎಡ್ಸನ್ ಅಲ್ವರೆಝ್ ಹಾಗೂ ಗುಲ್ಲೆರ್ಮೊ ಓಚೋವಾ ಅವರಂತಹ ಸ್ಟಾರ್ ಆಟಗಾರರಿದ್ದಾರೆ. ಓಚೋವಾ ಆರನೇ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 17 ವರ್ಷದ ಗಿಲ್ಬರ್ಟೊ ಪಂದ್ಯಾವಳಿಯಲ್ಲಿರುವ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ವಿಶ್ವದ 25ನೇ ರ‍್ಯಾಂಕಿನ ದಕ್ಷಿಣ ಕೊರಿಯಾ ತಂಡವು ಅರ್ಹತಾ ಸುತ್ತಿನ ಎಲ್ಲ 16 ಪಂದ್ಯಗಳಲ್ಲೂ ಜಯ ಸಾಧಿಸಿ ಅಜೇಯವಾಗಿ ಉಳಿದಿದೆ. 1986ರಿಂದ ಪ್ರತಿ ವಿಶ್ವಕಪ್‌ನಲ್ಲಿ ಆಡಿರುವ ಏಷ್ಯಾದ ಬಲಿಷ್ಠ ತಂಡವು 2002ರಲ್ಲಿ ಸೆಮಿಫೈನಲ್ ಗೆ ತಲುಪಿತ್ತು.
60ನೇ ರ‍್ಯಾಂಕಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ‘ಎ’ ಗುಂಪಿನಲ್ಲಿರುವ ಅತ್ಯಂತ ಕೆಳ ರ‍್ಯಾಂಕಿನ ತಂಡವಾಗಿದೆ. 1998, 2002 ಹಾಗೂ 2010ರ ವಿಶ್ವಕಪ್‌ಗಳಲ್ಲಿ ಗ್ರೂಪ್ ಹಂತದಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.
‘ಬಿ’ ಗುಂಪಿನಲ್ಲಿರುವ ಸ್ವಿಟ್ಸರ್ಲ್ಯಾಂಡ್ ತಂಡವು ಕಳೆದ ಮೂರು ವಿಶ್ವಕಪ್‌ಗಳಲ್ಲೂ ನಾಕೌಟ್ ಹಂತ ತಲುಪಿದೆ. ಸತತ ನಾಲ್ಕನೇ ಬಾರಿ ನಾಕೌಟ್ ಹಂತಕ್ಕೇರುವ ಫೇವರಿಟ್ ತಂಡವಾಗಿದೆ. ಸ್ವಿಸ್ ತಂಡದ ನಾಯಕ ಗ್ರಾನಿಟ್ ಝಾಕಾ ತಮ್ಮ ದೇಶದ ಪರ ಗರಿಷ್ಠ ಪಂದ್ಯಗಳನ್ನಾಡಿದ ಆಟಗಾರನಾಗಲಿದ್ದಾರೆ. ಸ್ವಿಸ್ ತಂಡವು 1934, 1938 ಹಾಗೂ 1954ರ ವಿಶ್ವಕಪ್ ಟೂರ್ನಿಗಳಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು.
ಸಹ ಆತಿಥೇಯ ದೇಶವಾದ ಕೆನಡಾ ವಿಶ್ವಕಪ್‌ನಲ್ಲಿ ಈ ತನಕ ಆಡಿರುವ ಎಲ್ಲ ಪಂದ್ಯಗಳಲ್ಲೂ ಸೋತಿದೆ. 1986 ಹಾಗೂ 2022ರ ವಿಶ್ವಕಪ್ ಟೂರ್ನಿಗಳಲ್ಲಿ ಮಾತ್ರ ಆಡಿದೆ.
ಬೋಸ್ನಿಯಾ ಮತ್ತು ಹೆರ್ಝೆಗೋವಿನಾ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಮಾಜಿ ಚಾಂಪಿಯನ್ ಇಟಲಿ ತಂಡವನ್ನು ಮಣಿಸಿ ಎರಡನೇ ಬಾರಿ ವಿಶ್ವಕಪ್ ಗೆ ಟಿಕೆಟ್ ಪಡೆದಿದೆ. ಕಳೆದ ಎರಡು ಆವೃತ್ತಿಗಳ ಟೂರ್ನಿಗಳಲ್ಲಿ ಈ ತಂಡ ಆಡಿರಲಿಲ್ಲ. ಕೆನಡಾ ತಂಡದಲ್ಲಿ ಕೇರಳದ ಕಣ್ಣೂರು ಮೂಲದ ತಹ್ಸಿನ್ ಜಮ್ಶಿದ್ ಅವರಿದ್ದಾರೆ.
‘ಸಿ’ ಗುಂಪಿನಲ್ಲಿರುವ ಬ್ರೆಝಿಲ್ ತಂಡವು ಈ ತನಕ ನಡೆದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲೂ ಆಡಿರುವ ಏಕೈಕ ತಂಡವಾಗಿದೆ. ಎಲ್ಲ ತಂಡಗಳಿಗಿಂತ ಹೆಚ್ಚು ವಿಶ್ವಕಪ್‌ಗಳನ್ನು (5) ಮುಡಿಗೇರಿಸಿಕೊಂಡಿದೆ. 2002ರಲ್ಲಿ ಕೊನೆಯ ಬಾರಿ ವಿಶ್ವಕಪ್ ಗೆದ್ದಿತ್ತು. ಈ ಹಿಂದೆ 1958, 1962, 1970 ಹಾಗೂ 1994ರಲ್ಲೂ ವಿಶ್ವಕಪ್ ಗೆದ್ದುಕೊಂಡಿತ್ತು.
ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಈ ತಂಡವು ಇದೇ ಮೊದಲ ಬಾರಿ ವಿದೇಶಿ ಕೋಚ್ ರನ್ನು ನೇಮಕ ಮಾಡಿಕೊಂಡಿದೆ. ಇಟಲಿಯ ಕಾರ್ಲೊ ಅನ್ಸೆಲೊಟ್ಟಿ ಅವರು ಎಲ್ಲ ಐದು ಪ್ರಮುಖ ಯುರೋಪಿಯನ್ ಲೀಗ್‌ಗಳನ್ನು ಗೆದ್ದಿರುವ ಶ್ರೇಷ್ಠ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ.
ಅನ್ಸೆಲೊಟ್ಟಿ ಅವರು ನೇಮರ್‌ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಬ್ರೆಝಿಲ್‌ನ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ನೇಮರ್ ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬ್ರೆಝಿಲ್ ತಂಡವು ವಿನಿಸಿಯಸ್ ಜೂನಿಯರ್ ಹಾಗೂ ಅನುಭವಿ ಆಟಗಾರ ಕ್ಯಾಸೆಮಿರೊ ಅವರ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ.
‘ಸಿ’ ಗುಂಪಿನಲ್ಲಿರುವ ಮೊರೊಕ್ಕೊ ತಂಡವು ದೋಹಾದಲ್ಲಿ ನಡೆದ 2022ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ ಮೊದಲ ಆಫ್ರಿಕನ್ ತಂಡವಾಗಿ ಇತಿಹಾಸ ನಿರ್ಮಿಸಿತ್ತು.
ಸ್ಕಾಟ್ಲ್ಯಾಂಡ್ ತಂಡವು ಮೂರು ದಶಕಗಳ ನಂತರ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಡೆನ್ಮಾರ್ಕ್ ತಂಡವನ್ನು 4–2 ಗೋಲುಗಳ ಅಂತರದಿಂದ ಮಣಿಸಿ ತನ್ನದೇ ಶೈಲಿಯಲ್ಲಿ ವಿಶ್ವಕಪ್ ಗೆ ಪ್ರವೇಶಿಸಿತ್ತು. ಸ್ಕಾಟ್ಲ್ಯಾಂಡ್ 1998ರಲ್ಲಿ ಕೊನೆಯ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿತ್ತು.
ತನ್ನ ದೇಶದಲ್ಲಿ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿರುವ ಹೈಟಿ ತಂಡವು ವಿಶ್ವಕಪ್‌ಗೆ ಅರ್ಹತೆ ಪಡೆದು ಮಹತ್ವದ ಸಾಧನೆ ಮಾಡಿದೆ. ಸದ್ಯ ಫಿಫಾ ರ‍್ಯಾಂಕಿಂಗ್‌ನಲ್ಲಿ 83ನೇ ಸ್ಥಾನದಲ್ಲಿದೆ. 1974ರಲ್ಲಿ ಕೊನೆಯ ಬಾರಿ ವಿಶ್ವಕಪ್ ನಲ್ಲಿ ಸ್ಪರ್ಧಿಸಿತ್ತು.