ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಮಾನವ್ ಸುಥರ್; ಟೆಸ್ಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ಪಡೆದ ಟೀಮ್ ಇಂಡಿಯಾ
Photo : x@BCCI
ಹೊಸದಿಲ್ಲಿ, ಜೂ.8: ಎಡಗೈ ಸ್ಪಿನ್ನರ್ ಮಾನವ್ ಸುಥರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿ ಅಫ್ಘಾನಿಸ್ತಾನದ ಬ್ಯಾಟರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ಕೊನೆಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಮತ್ತು 300 ರನ್‌ಗಳ ಅಂತರದಿಂದ ಜಯಶಾಲಿಯಾಯಿತು. ಇದರೊಂದಿಗೆ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಅಂತರದ ಗೆಲುವು ದಾಖಲಿಸಿದೆ.
ಮೂರನೇ ದಿನವಾದ ಸೋಮವಾರ ಭಾರತದ ಬೌಲಿಂಗ್ ಪ್ರಾಬಲ್ಯಕ್ಕೆ ನಿರುತ್ತರವಾಗಿ ಅಫ್ಘಾನಿಸ್ತಾನ ತಂಡವು 15 ವಿಕೆಟ್‌ಗಳನ್ನು ಕಳೆದುಕೊಂಡಿತು.
23 ವರ್ಷದ ರಾಜಸ್ಥಾನದ ಬೌಲರ್ ಮಾನವ್ ಸುಥರ್ ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗೆ ಆರು ವಿಕೆಟ್ ಪಡೆದರು. ಪಂದ್ಯದಲ್ಲಿ 62 ರನ್‌ಗೆ ಏಳು ವಿಕೆಟ್‌ಗಳನ್ನು ಉರುಳಿಸಿ ಅತ್ಯುತ್ತಮ ಪ್ರದರ್ಶನ ನೀಡಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಸುಥರ್ ಪ್ರದರ್ಶನದಿಂದ ಭಾರತ ತಂಡವು ಭರ್ಜರಿ ಗೆಲುವು ಪಡೆದಿದೆ. ಮಾತ್ರವಲ್ಲ, ಟೆಸ್ಟ್ ತಂಡದಲ್ಲಿ ರವೀಂದ್ರ ಜಡೇಜ ಅವರ ಉತ್ತರಾಧಿಕಾರಿಯೊಬ್ಬ ಹೊರಹೊಮ್ಮಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಸುಥರ್: ಸುಥರ್ ಸ್ಪಿನ್ ಮೋಡಿಯೆದುರು ಅಫ್ಘಾನಿಸ್ತಾನ ತಂಡವು ಯಾವ ಹಂತದಲ್ಲೂ ಹೋರಾಟವನ್ನೇ ನೀಡಲಿಲ್ಲ. ಅತ್ಯುತ್ತಮ ಹಿಡಿತದೊಂದಿಗೆ ಬೌಲಿಂಗ್ ಮಾಡಿದ ಸುಥರ್ ಸ್ಥಿರ ಪ್ರದರ್ಶನ ನೀಡಿದರು. ಎಡಗೈ ಸ್ಪಿನ್ನರ್ ನಿರಂತರವಾಗಿ ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆದರು. ಟರ್ನ್ ಹಾಗೂ ಬೌನ್ಸ್ ಮೂಲಕ ಪ್ರವಾಸಿ ತಂಡದ ಬ್ಯಾಟರ್‌ಗಳಿಗೆ ಸಮಸ್ಯೆಯೊಡ್ಡಿದರು.
ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗೆ ಆರು ವಿಕೆಟ್ ಗೊಂಚಲು ಪಡೆದ ಸುಥರ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದ ಭಾರತದ 10ನೇ ಬೌಲರ್ ಹಾಗೂ ಭಾರತದ ಏಳನೇ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಆರು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಗಳ ಎಲೈಟ್ ಪಟ್ಟಿಗೆ ಸುಥರ್ ಸೇರ್ಪಡೆಯಾದರು.
38 ವರ್ಷಗಳ ಬಳಿಕ ಚೊಚ್ಚಲ ಟೆಸ್ಟ್ ಪಂದ್ಯದ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್ ಒಬ್ಬರು ಇಂತಹ ಸಾಧನೆ ಮಾಡಿದರು.
ನರೇಂದ್ರ ಹಿರ್ವಾನಿ ತಮ್ಮ ಚೊಚ್ಚಲ ಟೆಸ್ಟ್ ಇನಿಂಗ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕೊನೆಯ ಭಾರತೀಯ ಬೌಲರ್ ಆಗಿದ್ದಾರೆ. ಹಿರ್ವಾನಿ 1988ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ 61 ರನ್‌ಗೆ ಎಂಟು ವಿಕೆಟ್ ಪಡೆದಿದ್ದರು. ಆ ಪಂದ್ಯದಲ್ಲಿ ಹಿರ್ವಾನಿ ಒಟ್ಟು 16 ವಿಕೆಟ್‌ಗಳನ್ನು ಪಡೆದಿದ್ದರು.
ಮಾನವ್ ಸುಥರ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್‌ಗಳ ವಿಶೇಷ ಕ್ಲಬ್‌ಗೆ ಸೇರ್ಪಡೆಯಾದರು. ಸುಥರ್‌ಗಿಂತ ಮೊದಲು ಹಿರ್ವಾನಿ, ಆರ್. ಅಶ್ವಿನ್, ದಿಲಿಪ್ ದೋಶಿ ಹಾಗೂ ಸಯ್ಯದ್ ಅಬಿದ್ ಅಲಿ ತಮ್ಮ ಮೊದಲ ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಈ ಸಾಧನೆ ಮಾಡಿದ್ದರು.
ಆರ್. ಅಶ್ವಿನ್ ನಿವೃತ್ತಿಯಾಗಿದ್ದು, ಜಡೇಜ ತಮ್ಮ ಟೆಸ್ಟ್ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಸುಥರ್ ಸರಿಯಾದ ಸಮಯದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚಲು ಆರಂಭಿಸಿದ್ದಾರೆ.
ಸ್ಪಿನ್ ಮೋಡಿಗೆ ತತ್ತರಿಸಿದ ಅಫ್ಘಾನಿಸ್ತಾನ
ಪ್ರವಾಸಿ ಅಫ್ಘಾನಿಸ್ತಾನ ತಂಡವು ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ನಿರುತ್ತರವಾಯಿತು. ಸೋಮವಾರ 5 ವಿಕೆಟ್‌ಗಳ ನಷ್ಟಕ್ಕೆ 113 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಅಫ್ಘಾನ್ ತಂಡವು ಕೇವಲ 152 ರನ್ ಗಳಿಸಿ ಭಾರತ ತಂಡಕ್ಕೆ 412 ರನ್ ಮುನ್ನಡೆ ಬಿಟ್ಟುಕೊಟ್ಟಿತು.
ರಹಮತ್ ಶಾ (60 ರನ್, 135 ಎಸೆತ) ಅವರ ಪ್ರತಿರೋಧಕ್ಕೆ ತೆರೆ ಎಳೆದ ಮಾನವ್ ಸುಥರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪೂರೈಸಿದರು. ರಹಮತ್ ಶಾ ಅಫ್ಘಾನಿಸ್ತಾನದ ಪರ 1,000 ಟೆಸ್ಟ್ ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ 60 ರನ್ ಗಳಿಸಿದ ರಹಮತ್ ಒಟ್ಟು 1,043 ರನ್ ಗಳಿಸಿದರು.
ಫಾಲೋ ಆನ್‌ಗೆ ಸಿಲುಕಿದ ಅಫ್ಘಾನಿಸ್ತಾನ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಇನ್ನಷ್ಟು ಕಳಪೆ ಪ್ರದರ್ಶನ ನೀಡಿತು. ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ (4-36) ಹಾಗೂ ಕುಲದೀಪ್ ಯಾದವ್ (3-30) ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡವು ಕೇವಲ 35.5 ಓವರ್‌ಗಳಲ್ಲಿ 112 ರನ್ ಗಳಿಸಿ ಆಲೌಟಾಯಿತು. ಸುಥರ್ ಎರಡನೇ ಇನಿಂಗ್ಸ್‌ನಲ್ಲಿ 29 ರನ್‌ಗೆ ಒಂದು ವಿಕೆಟ್ ಪಡೆದರು.
ಅಫ್ಘಾನಿಸ್ತಾನದ ಬ್ಯಾಟರ್‌ಗಳು ಅತ್ಯುತ್ತಮ ಸ್ಪಿನ್ ದಾಳಿ ಎದುರಿಸಲು ಪರದಾಡಿದ್ದಲ್ಲದೆ, ಹೊಡೆತದ ಆಯ್ಕೆಯಲ್ಲೂ ಎಡವಿದರು. ಹೀಗಾಗಿ ಮೂರನೇ ದಿನದಾಟದಲ್ಲೇ ಭಾರತ ಭರ್ಜರಿ ಗೆಲುವು ದಾಖಲಿಸಿತು.