×
Ad

ಐದನೇ ಆ್ಯಶಸ್ ಟೆಸ್ಟ್ | ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟ; ಸ್ಥಾನ ಉಳಿಸಿಕೊಂಡ ಉಸ್ಮಾನ್ ಖ್ವಾಜಾ, ಕಮಿನ್ಸ್ ಅಲಭ್ಯ

Update: 2026-01-01 21:03 IST

ಉಸ್ಮಾನ್ ಖ್ವಾಜಾ | Photo Credit : PTI 

ಮೆಲ್ಬರ್ನ್, ಜ.1: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಜನವರಿ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ತಂಡದ ವಿರುದ್ಧ ಐದನೇ ಹಾಗೂ ಕೊನೆಯ ಆ್ಯಶಸ್ ಟೆಸ್ಟ್ ಪಂದ್ಯಕ್ಕಾಗಿ 15 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ ಎಂದು ಕ್ರಿಕೆಟ್ ಡಾಟ್‌ಕಾಮ್ ಎಯು ಖಚಿತಪಡಿಸಿದೆ.

ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಅವರು ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಬೆನ್ನುನೋವಿನಿಂದ ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿರುವ ಖಾಯಂ ನಾಯಕ ಕಮಿನ್ಸ್ ಅವರು ಆ್ಯಶಸ್ ಸರಣಿಯ ಮೊದಲೆರಡು ಪಂದ್ಯಗಳಿಂದ ವಂಚಿತರಾಗಿದ್ದರು. ಅಡಿಲೇಡ್ ಟೆಸ್ಟ್‌ಗೆ ಕಮಿನ್ಸ್ ವಾಪಸಾಗಿದ್ದರು. ಆಗ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕಮಿನ್ಸ್ ಅವರು ಸ್ವದೇಶಿ ನೆಲದಲ್ಲಿ ಆ್ಯಶಸ್ ಸರಣಿಯನ್ನು ಗೆಲ್ಲುವಲ್ಲಿ ನೆರವಾಗಿದ್ದರು. ಇದೀಗ ಟೀಮ್ ಮ್ಯಾನೇಜ್‌ಮೆಂಟ್ ಸರಣಿಯ ಉಳಿದಿರುವ ಪಂದ್ಯಗಳಿಗೆ ವೇಗದ ಬೌಲರ್ ಕಮಿನ್ಸ್‌ಗೆ ವಿಶ್ರಾಂತಿ ನೀಡಲು ಮುಂದಾಗಿದೆ.

ಕಮಿನ್ಸ್ ಅವರ ಕೆಲಸದ ಒತ್ತಡವನ್ನು ಎಚ್ಚರಿಕೆಯಿಂದ ನಿಭಾಯಿಸಲು ಹಾಗೂ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಸಂಪೂರ್ಣ ಫಿಟ್ ಆಗಿರುವುದನ್ನು ಖಚಿತಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾಗತಿಕ ಕ್ರಿಕೆಟ್ ಪಂದ್ಯಾವಳಿಗೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ತಾತ್ಕಾಲಿಕ ತಂಡದಲ್ಲಿ ಕಮಿನ್ಸ್‌ಗೆ ಅವಕಾಶ ನೀಡಲಾಗಿದೆ.

ಟೆಸ್ಟ್ ಭವಿಷ್ಯದ ಕುರಿತು ಊಹಾಪೋಹಗಳು ಸುತ್ತುವರಿದಿದ್ದರೂ ಉಸ್ಮಾನ್ ಖ್ವಾಜಾ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. 39ರ ಹರೆಯದ ಖ್ವಾಜಾ ಸರಣಿಯ ಆರಂಭದಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಆದರೆ ಬೆನ್ನುನೋವಿನಿಂದಾಗಿ ಪರ್ತ್ ಟೆಸ್ಟ್‌ ನ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಬ್ರಿಸ್ಬೇನ್ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದರು. ಅಡಿಲೇಡ್ ಟೆಸ್ಟ್‌ನಲ್ಲಿ ಆರಂಭದಲ್ಲಿ ಹೊರಗುಳಿದಿದ್ದ ಖ್ವಾಜಾ ಅವರು ಸ್ಟೀವ್ ಸ್ಮಿತ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಆಡುವ 11ರ ಬಳಗ ಸೇರಿದ್ದರು.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಖ್ವಾಜಾ ಮೊದಲ ಇನಿಂಗ್ಸ್‌ ನಲ್ಲಿ 29 ರನ್ ಗಳಿಸಿ ಮಧ್ಯಮ ಸರದಿಯಲ್ಲಿ ಟ್ರಾವಿಸ್ ಹೆಡ್ ಹಾಗೂ ಜೇಕ್ ವೆದರಾಲ್ಡ್ ಅವರೊಂದಿಗೆ ತಂಡವನ್ನು ಆಧರಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು.

ಸರಣಿಯಲ್ಲಿ ಈ ತನಕ ಮೂರು ಪಂದ್ಯಗಳ ಐದು ಇನಿಂಗ್ಸ್‌ ಗಳಲ್ಲಿ 30.60ರ ಸರಾಸರಿಯಲ್ಲಿ ಒಟ್ಟು 153 ರನ್ ಗಳಿಸಿದ್ದು, ಅಡಿಲೇಡ್‌ನಲ್ಲಿ ಏಕೈಕ ಅರ್ಧಶತಕ ಗಳಿಸಿದ್ದರು.

ಮೆಲ್ಬರ್ನ್‌ನಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ನಾಲ್ಕು ವಿಕೆಟ್‌ಗಳ ಅಂತರದಿಂದ ಸೋತ ನಂತರ ಆಸ್ಟ್ರೇಲಿಯ ತಂಡವು ಸಿಡ್ನಿ ಟೆಸ್ಟ್‌ನಲ್ಲಿ ತಿರುಗೇಟು ನೀಡುವತ್ತ ಚಿತ್ತ ಹರಿಸಿದೆ.

ಐದನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ತಂಡ:

ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕಲ್ ನೆಸರ್, ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News