×
Ad

ಎಫ್ಐಎಚ್ ಜೂನಿಯರ್ ಮಹಿಳೆಯರ ವಿಶ್ವಕಪ್: ಭಾರತಕ್ಕೆ ಕೆನಡಾ ತಂಡ ಮೊದಲ ಎದುರಾಳಿ

Update: 2023-06-23 23:22 IST

Photo : ANI

ಹೊಸದಿಲ್ಲಿ: ಎಫ್ಐಎಚ್ ಜೂನಿಯರ್ ಮಹಿಳೆಯರ ವಿಶ್ವಕಪ್-2023ರ ವೇಳಾಪಟ್ಟಿ ಪ್ರಕಟವಾಗಿದ್ದು, ಗ್ರೂಪ್ ಸಿ ಯಲ್ಲಿರುವ ಭಾರತವು ನವೆಂಬರ್ 29ರಂದು ಚಿಲಿಯ ಸ್ಯಾಂಟಿಯಾಗೊ ನ್ಯಾಶನಲ್ ಸ್ಟೇಡಿಯಮ್ನ ಫೀಲ್ಡ್ ಹಾಕಿ ಸ್ಪೋರ್ಟ್ಸ್ಸೆಂಟರ್ನಲ್ಲಿ ಕೆನಡಾ ತಂಡವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಭಾರತ ಹಾಕಿ ತಂಡವು ನವೆಂಬರ್ 30ರಂದು ಜರ್ಮನಿ ಹಾಗೂ ಡಿ. 2ರಂದು ಬೆಲ್ಜಿಯಮ್ ವಿರುದ್ಧ ಕೊನೆಯ ಗ್ರೂಪ್ ಪಂದ್ಯವನ್ನು ಆಡಲಿದೆ.

ವಿಶ್ವಕಪ್ ನ ಫೈನಲ್ ಪಂದ್ಯವು ಡಿಸೆಂಬರ್ 10ರಂದು ನಿಗದಿಯಾಗಿದೆ.ಈ ವರ್ಷದ ಜೂನ್ನಲ್ಲಿ ಜಪಾನ್ ನಲ್ಲಿ ನಡೆದ ಮಹಿಳೆಯರ ಜೂನಿಯರ್ ಏಶ್ಯಕಪ್-2023ರಲ್ಲಿ ಪ್ರಶಸ್ತಿ ಜಯಿಸಿರುವ ಭಾರತದ ಮಹಿಳಾ ತಂಡ ಈ ಟೂರ್ನಿಗೆ ಭಾರೀ ವಿಶ್ವಾಸದೊಂದಿಗೆ ಪ್ರವೇಶಿಸಲು ಸಿದ್ಧವಾಗುತ್ತಿದೆ. ಟೂರ್ನಮೆಂಟ್ ನ ಇತಿಹಾಸದಲ್ಲಿ ಮೊದಲ ಬಾರಿ ಪ್ರತಿಷ್ಠಿತ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.

ಹಿಂದಿನ ಆವೃತ್ತಿಯ ಎಫ್ಐಎಚ್ ಜೂನಿಯರ್ ಮಹಿಳೆಯರ ವಿಶ್ವಕಪ್ ನಲ್ಲಿ ಭಾರತವು ಕಂಚಿನ ಪದಕ ಗೆಲ್ಲುವ ಸನಿಹಕ್ಕೆ ತಲುಪಿತ್ತು. ಆದರೆ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿ ತನ್ನ ಕನಸನ್ನು ಈಡೇರಿಸಿಕೊಳ್ಳುವಲ್ಲಿ ವಿಫಲವಾಯಿತು.

‘‘ವಿಶ್ವಕಪ್ಗಾಗಿ ಗ್ರೂಪ್ ಗಳ ಅನಾವರಣ ನೋಡಿ ನಾವು ರೋಮಾಂಚಿತವಾಗಿದ್ದೇವೆ. ವಿಶ್ವದಾದ್ಯಂತದ ಕೆಲವು ಅತ್ಯುತ್ತಮ ಜೂನಿಯರ್ ತಂಡಗಳ ವಿರುದ್ಧ ಸ್ಪರ್ಧಿಸಲು ಸಜ್ಜಾಗುತ್ತಿರುವಾಗ ನಮ್ಮ ತಂಡಕ್ಕೆ ಇದು ರೋಮಾಂಚನಕಾರಿ ಕ್ಷಣವಾಗಿದೆ’’ ಎಂದು ಮಹಿಳೆಯರ ಜೂನಿಯರ್ ಏಶ್ಯಕಪ್ 2023ರ ವಿಜೇತ ತಂಡದ ನಾಯಕಿ ಪ್ರೀತಿ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News