ಮೊದಲ ಆ್ಯಶಸ್ ಟೆಸ್ಟ್ ನಿಂದ ಪ್ಯಾಟ್ ಕಮಿನ್ಸ್ ಹೊರಗುಳಿಯುವ ಸಾಧ್ಯತೆ
ಪ್ಯಾಟ್ ಕಮಿನ್ಸ್ | Photo Credit : X
ಮೆಲ್ಬರ್ನ್, ಅ.8: ಬೆನ್ನುನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಕಮಿನ್ಸ್ ಅವರು ಪರ್ತ್‌ನಲ್ಲಿ ನವೆಂಬರ್ 21ರಿಂದ ಆರಂಭವಾಗಲಿರುವ ಸಂಪೂರ್ಣ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದಲೇ ಹೊರಗುಳಿಯುವ ಸಾಧ್ಯತೆಯೂ ಇದೆ.
ಸ್ಟಾರ್ ವೇಗದ ಬೌಲರ್ ಈ ತನಕವೂ ಬೌಲಿಂಗ್ ಅಭ್ಯಾಸ ಆರಂಭಿಸಿಲ್ಲ. ಮೊದಲ ಪಂದ್ಯಕ್ಕೆ ಸಜ್ಜಾಗಲು 4ರಿಂದ 6 ವಾರಗಳ ಕಾಲ ತರಬೇತಿ ನಡೆಸುವ ಅಗತ್ಯವೂ ಇದೆ ಎಂದು ‘ಕೋಡ್‌ಸ್ಪೋರ್ಟ್ಸ್’ ವರದಿ ಮಾಡಿದೆ.
ಇತ್ತೀಚೆಗಿನ ಸ್ಕ್ಯಾನಿಂಗ್ ವರದಿಯಲ್ಲಿ ಕಮಿನ್ಸ್ ಅವರ ಬೆನ್ನುನೋವು ಗುಣಮುಖವಾಗುತ್ತಿರುವುದು ಕಂಡುಬಂದಿದೆ.
ಆದರೆ, ಅವರು ತಂಡಕ್ಕೆ ಮರಳುವ ಕುರಿತಂತೆ ವೈದ್ಯಕೀಯ ಸಿಬ್ಬಂದಿ ಎಚ್ಚರಿಕೆಯಿಂದಿದೆ. ನಾಯಕ ಹಾಗೂ ಪ್ರಮುಖ ವೇಗದ ಬೌಲರ್ ಆಗಿ ತಂಡಕ್ಕೆ ಅತ್ಯಂತ ಮುಖ್ಯವಾಗಿರುವ ಕಮಿನ್ಸ್ ಅವರ ಆರೋಗ್ಯವನ್ನು ದೀರ್ಘಕಾಲ ಕಾಪಾಡಲು ವೈದ್ಯಕೀಯ ಸಿಬ್ಬಂದಿ ಬಯಸಿದೆ ಎಂದು ಆಸ್ಟ್ರೇಲಿಯ ಮಾಧ್ಯಮ ವರದಿ ಮಾಡಿದೆ.
ಕಮಿನ್ಸ್ ತಂಡಕ್ಕೆ ಮರಳುವ ಮೊದಲು ಸಂಪೂರ್ಣ ಫಿಟ್ ಆಗುವುದು ಮುಖ್ಯವಾಗಿದೆ ಎಂದು ಒತ್ತಿ ಹೇಳಿರುವ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ, ‘‘ಅವರು ಶೇ.100ರಷ್ಟು ಫಿಟ್ ಆಗುವ ತನಕ ಕಾಯುವುದು ಉತ್ತಮ. ಏಕೆಂದರೆ ಮೊದಲ ಟೆಸ್ಟ್‌ನಲ್ಲಿ 80ರಿಂದ 90 ಶೇ. ಫಿಟ್ ಇದ್ದಾಗ ಆಡಿದರೆ ಅವರು ಮತ್ತೊಮ್ಮೆ ಬೆನ್ನುನೋವಿಗೆ ಒಳಗಾಗುವ ಸಾಧ್ಯತೆಯಿದೆ’’ಎಂದರು.
ಒಂದು ವೇಳೆ ಆ್ಯಶಸ್ ಟೆಸ್ಟ್‌ಗೆ ಕಮಿನ್ಸ್ ಗೈರಾದರೆ, ಸ್ಟೀವ್ ಸ್ಮಿತ್ ನಾಯಕತ್ವವಹಿಸಬಹುದು, ಸ್ಕಾಟ್ ಬೋಲ್ಯಾಂಡ್ ವೇಗದ ಬೌಲಿಂಗ್ ವಿಭಾಗಕ್ಕೆ ಸೇರಲಿದ್ದಾರೆ.
ಇದೇ ವೇಳೆ, ಆ್ಯಶಸ್ ಸರಣಿಗೆ ತಯಾರಿ ನಡೆಸಲು ಜೋಶ್ ಹೇಝಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಭಾರತ ಹಾಗೂ ಶೀಫೀಲ್ಡ್ ಶೀಲ್ಡ್ ಪಂದ್ಯಗಳಲ್ಲಿ ಆಡುತ್ತಿದ್ದಾರೆ.
2017ರಲ್ಲಿ ಟೆಸ್ಟ್ ಕ್ರಿಕೆಟಿಗೆ ವಾಪಸಾದ ನಂತರ ಕಮಿನ್ಸ್ ಅವರು ಕೆಲವೇ ಪಂದ್ಯಗಳಿಂದ ವಂಚಿತರಾಗಿದ್ದರು. ಈ ವರ್ಷ 300 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಆಸ್ಟ್ರೇಲಿಯದ 8ನೇ ಬೌಲರ್ ಎನಿಸಿಕೊಂಡಿದ್ದರು.