×
Ad

ಪ್ರಥಮ ಟಿ-20 | ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಬಾರಿ ಗೆದ್ದ ನೇಪಾಳ!

Update: 2025-09-28 20:16 IST

PC : @ICCAsiaCricket

ಶಾರ್ಜಾ, ಸೆ.28: ಆರಂಭಿಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವನ್ನು 19 ರನ್ ಅಂತರದಿಂದ ರೋಚಕವಾಗಿ ಮಣಿಸಿರುವ ನೇಪಾಳ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ದ ಮೊತ್ತ ಮೊದಲ ಬಾರಿ ಗೆಲುವು ದಾಖಲಿಸಿದೆ.

ನೇಪಾಳ ಈ ಮೊದಲು 2014ರಲ್ಲಿ ಅಫ್ಘಾನಿಸ್ತಾನ ತಂಡವನ್ನು ಮಣಿಸಿತ್ತು. ಆಗ ಅಫ್ಘಾನ್, ಅಸೋಸಿಯೇಟ್ ತಂಡವಾಗಿತ್ತು.

ಶನಿವಾರದ ಫಲಿತಾಂಶದೊಂದಿಗೆ ನೇಪಾಳ ತಂಡವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದೆ. ಕೆರಿಬಿಯನ್ ತಂಡದ ವಿರುದ್ಧ ಮೊದಲ ಬಾರಿ ಆಡಿದ ಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೇಪಾಳ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತ್ತು. ಆನಂತರ ವೆಸ್ಟ್‌ಇಂಡೀಸ್ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 129 ರನ್‌ಗೆ ನಿಯಂತ್ರಿಸಿತು.

ವೆಸ್ಟ್‌ಇಂಡೀಸ್ ತಂಡದ ಬೌಲರ್‌ಗಳಾದ ಅಕೀಲ್ ಹುಸೇನ್(1-18) ಹಾಗೂ ಜೇಸನ್ ಹೋಲ್ಡರ್(4-20) 4ನೇ ಓವರ್‌ನಲ್ಲಿ ನೇಪಾಳದ ಆರಂಭಿಕ ಆಟಗಾರರಾದ ಕುಶಾಲ್(6ರನ್) ಹಾಗೂ ಆಸೀಫ್ ಶೇಕ್(3) ವಿಕೆಟ್‌ಗಳನ್ನು ಉರುಳಿಸಿದರು . ಆದರೆ ನೇಪಾಳದ ನಾಯಕ ರೋಹಿತ್ ಪೌದೆಲ್(38 ರನ್) ಹಾಗೂ ಕುಶಾಲ್ ಮಲ್ಲಾ(30 ರನ್) ಮೂರನೇ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ಆಧರಿಸಿದರು. ವಿಂಡೀಸ್ ಸ್ಪಿನ್ನರ್ ನವೀನ್ ಬಿಡೈಸೀ (3-29) ಈ ಇಬ್ಬರನ್ನು ಬೆನ್ನು ಬೆನ್ನಿಗೆ ಔಟ್ ಮಾಡಿದರು.

19ನೇ ಓವರ್‌ನಲ್ಲಿ ಹೋಲ್ಡರ್ ಅವರು ನೇಪಾಳದ 3 ವಿಕೆಟ್‌ಗಳನ್ನು ಪಡೆದರು. ವಿಂಡೀಸ್‌ನ ಕಳಪೆ ಫೀಲ್ಡಿಂಗ್ ಲಾಭ ಪಡೆದ ನೇಪಾಳ ತಂಡವು ಸ್ಪರ್ಧಾತ್ಮಕ ಸ್ಕೋರ್(148 ರನ್) ಗಳಿಸಿತು.

ವೆಸ್ಟ್‌ಇಂಡೀಸ್ ತಂಡ ರನ್ ಚೇಸ್ ಮಾಡುವಾಗ ಕೈಲ್ ಮಯೆರ್ಸ್(5 ರನ್) ರನೌಟಾದರು. ಮಧ್ಯಮ ಓವರ್‌ನಲ್ಲಿ ಲಲಿತ್ ರಾಜ್(1-6) ಹಾಗೂ ರೋಹಿತ್(1-20) ಬಿಗಿ ಬೌಲಿಂಗ್ ಮಾಡಿ ವಿಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿಂಡೀಸ್ ಪರ ನವೀನ್ ಬಿಡೈಸಿ (22 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News