×
Ad

ಇಂದು ಮೊದಲ ಟಿ–20 ಪಂದ್ಯ; ಭಾರತ–ನ್ಯೂಝಿಲ್ಯಾಂಡ್ ಸೆಣಸಾಟ

Update: 2026-01-21 07:43 IST

ನಾಗಪುರ, ಜ.20: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ಧ ಬುಧವಾರ ಆರಂಭವಾಗಲಿರುವ ಐದು ಪಂದ್ಯಗಳ ಟಿ–20 ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ, ತನ್ನದೇ ನೆಲದಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ–20 ವಿಶ್ವಕಪ್ ಟೂರ್ನಿಗೆ ಅಂತಿಮ ತಾಲೀಮು ನಡೆಸಲಿದೆ.

ನ್ಯೂಝಿಲ್ಯಾಂಡ್ ತಂಡವು ಒಂದು ವರ್ಷದೊಳಗೆ ಭಾರತ ನೆಲದಲ್ಲಿ ಭಾರತ ತಂಡದ ವಿರುದ್ಧ ಮೊದಲ ಬಾರಿ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ. 2012ರಲ್ಲಿ ಏಕೈಕ ಟಿ–20 ಪಂದ್ಯವನ್ನು ಗೆದ್ದಿದ್ದ ಕಿವೀಸ್, ಮೊದಲ ಬಾರಿಗೆ ಐದು ಪಂದ್ಯಗಳ ಟಿ–20 ಸರಣಿಯನ್ನು ಗೆಲ್ಲುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಟಿ–20 ವಿಶ್ವಕಪ್‌ಗೆ ಮುನ್ನ ಕಿವೀಸ್ ಆಡಲಿರುವ ಕೊನೆಯ ಸರಣಿ ಇದಾಗಿದೆ.

2017 ಹಾಗೂ 2023ರಲ್ಲಿ ಉಭಯ ತಂಡಗಳು ಮೂರು ಪಂದ್ಯಗಳ ಟಿ–20 ಸರಣಿಯನ್ನು ಆಡಿದ್ದವು. ಎರಡೂ ಬಾರಿ ಭಾರತ 2–1 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. ಇತ್ತೀಚೆಗೆ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಪ್ರಮುಖ ಆಟಗಾರರ ಕೊರತೆಯನ್ನು ಎದುರಿಸಿದ್ದವು. ಆದರೆ ಟಿ–20 ಕ್ರಿಕೆಟ್‌ನಲ್ಲಿ ಸಂಪೂರ್ಣ ಶಕ್ತಿಶಾಲಿ ತಂಡಗಳನ್ನು ಕಣಕ್ಕಿಳಿಸಲಿವೆ.

ಕಿವೀಸ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ ಹಾಗೂ ಜೇಕಬ್ ಡಫಿ ವಾಪಸಾಗಿದ್ದಾರೆ. ಭಾರತ ತಂಡದಲ್ಲಿ ಹಿರಿಯ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ, ಪ್ರಮುಖ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಲಭ್ಯವಿದ್ದಾರೆ.

ಮೈಕಲ್ ಬ್ರೆಸ್‌ವೆಲ್ ರವಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವುದರಿಂದ, ಕಿವೀಸ್ ಪರ ಮೊದಲ ಟಿ–20 ಪಂದ್ಯದಲ್ಲಿ ಆಡುವ ಸಾಧ್ಯತೆ ಇಲ್ಲ. ಗ್ಲೆನ್ ಫಿಲಿಪ್ಸ್ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗಲಿದ್ದಾರೆ. ಜೇಮ್ಸ್ ನೀಶಾಮ್ ಬದಲಿಗೆ ಆಡುವ ನಿರೀಕ್ಷೆ ಇದೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟಿ–20 ಶತಕ ಸಿಡಿಸಿದ್ದ ಟಿಮ್ ರಾಬಿನ್ಸನ್, ನವೆಂಬರ್‌ನಲ್ಲಿ ಸ್ವದೇಶದಲ್ಲಿ ನಡೆದ ವಿಂಡೀಸ್ ವಿರುದ್ಧದ ಸರಣಿಯಲ್ಲೂ ಮಿಂಚಿದ್ದರು. ರಾಬಿನ್ಸನ್ ಕಿವೀಸ್‌ನ ಟಿ–20 ವಿಶ್ವಕಪ್ ತಂಡದಲ್ಲಿಲ್ಲ. ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವಕಾಶ ಸಿಗುವ ವಿಶ್ವಾಸದಲ್ಲಿದ್ದಾರೆ.

2024ರ ಜೂನ್‌ನಲ್ಲಿ ಟಿ–20 ವಿಶ್ವಕಪ್ ಗೆದ್ದ ನಂತರ ಭಾರತ ತಂಡವು ಸತತವಾಗಿ ಎಂಟು ದ್ವಿಪಕ್ಷೀಯ ಟಿ–20 ಸರಣಿಗಳನ್ನು ಗೆದ್ದುಕೊಂಡಿದೆ. ಟಿ–20 ಕ್ರಿಕೆಟ್‌ನಲ್ಲಿ 29–5 ದಾಖಲೆಯನ್ನು ಹೊಂದಿದ್ದು, ಇದರಲ್ಲಿ ಎರಡು ಸೂಪರ್ ಓವರ್ ಗೆಲುವುಗಳೂ ಸೇರಿವೆ.

ಟಿ–20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಮೂರು ವಾರಗಳಿಗಿಂತ ಕಡಿಮೆ ಸಮಯ ಬಾಕಿ ಉಳಿದಿದ್ದು, ಕಿವೀಸ್ ವಿರುದ್ಧದ ಟಿ–20 ಸರಣಿಯು ನಾಯಕ ಸೂರ್ಯಕುಮಾರ್ ಯಾದವ್‌ಗೆ ಸತ್ವ ಪರೀಕ್ಷೆಯಾಗಿದೆ.

2024ರಲ್ಲಿ ಭಾರತದ ಟಿ–20 ತಂಡದ ನಾಯಕತ್ವ ವಹಿಸಿಕೊಂಡ ನಂತರ ಸೂರ್ಯಕುಮಾರ್ ಅವರ ಗೆಲುವಿನ ಸರಾಸರಿ 72ರಷ್ಟಿದೆ. ಇದು ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮರೆಮಾಚಿದೆ. ಭಾರತ ತಂಡವು ಸ್ವದೇಶದಲ್ಲಿ ಟಿ–20 ವಿಶ್ವಕಪ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡವಾಗುವ ವಿಶ್ವಾಸದಲ್ಲಿದೆ.

ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕಳೆದ ಎರಡು ವರ್ಷಗಳಿಂದ ಭಾರತದ ಟಿ–20 ತಂಡ ಮೇಲುಗೈ ಸಾಧಿಸುತ್ತಾ ಬಂದಿದೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ನೆಲದಲ್ಲಿ ಐತಿಹಾಸಿಕ ಸಾಧನೆಗೈದಿರುವ ನ್ಯೂಝಿಲ್ಯಾಂಡ್ ಸದ್ಯ ಭಾರೀ ಆತ್ಮವಿಶ್ವಾಸದಲ್ಲಿದೆ.

ಟಿ–20 ಕ್ರಿಕೆಟ್‌ನಲ್ಲಿ ಭಾರತ ಗೆಲ್ಲುವ ಫೇವರಿಟ್ ತಂಡವಾಗಿದ್ದರೂ, ಸೂರ್ಯಕುಮಾರ್ ಅವರ ಫಾರ್ಮ್ ಕಳವಳಕಾರಿಯಾಗಿದೆ. ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಟಿ–20 ಸರಣಿ ಜನವರಿ 21ರಿಂದ 31ರ ತನಕ ನಡೆಯಲಿದೆ.

ತಿಲಕ್ ವರ್ಮಾ ಬದಲಿಗೆ ಇಶಾನ್ ಕಿಶನ್

ಕಿವೀಸ್ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಗಾಯಾಳು ತಿಲಕ್ ವರ್ಮಾ ಬದಲಿಗೆ ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಆಡುವ ಹೆಚ್ಚಿನ ಸಾಧ್ಯತೆ ಇದೆ. ನಾಗಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಈ ವಿಚಾರವನ್ನು ದೃಢಪಡಿಸಿದ್ದಾರೆ.

ಭಾರತವು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟು ಕಿಶನ್ ಅವರನ್ನು ಆಡಿಸಲಿದೆ. ಟಿ–20 ವಿಶ್ವಕಪ್ ಪೂರ್ವ ತಯಾರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ. ಫೆಬ್ರವರಿ 7ರಂದು ಆರಂಭವಾಗಲಿರುವ ವಿಶ್ವಕಪ್ ಟೂರ್ನಿಗೆ ಕಿಶನ್ ಆಯ್ಕೆಯಾಗಿದ್ದಾರೆ.

ತಿಲಕ್ ಅನುಪಸ್ಥಿತಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಮೂರು ಟಿ–20 ಪಂದ್ಯಗಳಿಗೆ ಅಯ್ಯರ್ ಆಯ್ಕೆಯಾಗಿದ್ದಾರೆ.

2023ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ–20 ಸರಣಿಯ ನಂತರ ಕಿಶನ್ ಭಾರತದ ಪರ ಆಡಿಲ್ಲ. ಕಿಶನ್ ಅವರು 32 ಟಿ–20 ಪಂದ್ಯಗಳಲ್ಲಿ 25.67ರ ಸರಾಸರಿಯಲ್ಲಿ 796 ರನ್ ಗಳಿಸಿದ್ದಾರೆ. ಅವರು ಬುಧವಾರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ನಿರೀಕ್ಷೆ ಇದೆ.

ಎಂಟನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ಶಿವಂ ದುಬೆ ಹಾಗೂ ಹರ್ಷಿತ್ ರಾಣಾ ನಡುವೆ ಪೈಪೋಟಿ ಏರ್ಪಟ್ಟಿದೆ.

ಸೂರ್ಯಕುಮಾರ್ ಯಾದವ್ ಅವರು ತಮ್ಮ 100ನೇ ಟಿ–20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಆದರೆ ಹಿಂದಿನ 22 ಟಿ–20 ಇನಿಂಗ್ಸ್‌ಗಳಲ್ಲಿ ಅವರು ಒಂದೂ ಅರ್ಧಶತಕವನ್ನು ಗಳಿಸಿಲ್ಲ. ಈ ಅವಧಿಯಲ್ಲಿ 12.84ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ತಂಡಗಳು (ಸಂಭಾವ್ಯ)

ಭಾರತ:

ಅಭಿಷೇಕ್ ಶರ್ಮಾ

ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್)

ಸೂರ್ಯಕುಮಾರ್ ಯಾದವ್ (ನಾಯಕ)

ಶ್ರೇಯಸ್ ಅಯ್ಯರ್ / ಇಶಾನ್ ಕಿಶನ್

ಹಾರ್ದಿಕ್ ಪಾಂಡ್ಯ

ಅಕ್ಷರ್ ಪಟೇಲ್

ರಿಂಕು ಸಿಂಗ್

ಹರ್ಷಿತ್ ರಾಣಾ / ಶಿವಂ ದುಬೆ

ಅರ್ಷದೀಪ್ ಸಿಂಗ್ / ಕುಲದೀಪ್ ಯಾದವ್

ಜಸ್‌ಪ್ರಿತ್ ಬುಮ್ರಾ

ವರುಣ್ ಚಕ್ರವರ್ತಿ


ನ್ಯೂಝಿಲ್ಯಾಂಡ್:

ಟಿಮ್ ರಾಬಿನ್ಸನ್

ಡೆವೊನ್ ಕಾನ್ವೆ (ವಿಕೆಟ್‌ಕೀಪರ್)

ರಚಿನ್ ರವೀಂದ್ರ

ಡ್ಯಾರಿಲ್ ಮಿಚೆಲ್

ಗ್ಲೆನ್ ಫಿಲಿಪ್ಸ್

ಮಾರ್ಕ್ ಚಾಪ್ಮನ್

ಜೇಮ್ಸ್ ನೀಶಾಮ್

ಮಿಚೆಲ್ ಸ್ಯಾಂಟ್ನರ್ (ನಾಯಕ)

ಮ್ಯಾಟ್ ಹೆನ್ರಿ

ಇಶ್ ಸೋಧಿ

ಜೇಕಬ್ ಡಫಿ


ಅಂಕಿ–ಅಂಶಗಳು

2016ರ ಟಿ–20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಕೊನೆಯ ಬಾರಿ ನಾಗಪುರದಲ್ಲಿ ಮುಖಾಮುಖಿಯಾಗಿದ್ದವು. ಆಗ ಮೂವರು ವೇಗಿಗಳನ್ನು ಬದಿಗಿಟ್ಟು ಮೂವರು ಸ್ಪಿನ್ನರ್‌ಗಳನ್ನು ಆಡಿಸಿದ ದಿಟ್ಟ ನಿರ್ಧಾರ ಕೈಗೊಂಡ ಕಿವೀಸ್ ಪಡೆ ಭಾರತವನ್ನು 79 ರನ್‌ಗೆ ಆಲೌಟ್ ಮಾಡಿತ್ತು.

ಹಾರ್ದಿಕ್ ಪಾಂಡ್ಯ ಪುರುಷರ ಟಿ–20 ಕ್ರಿಕೆಟ್‌ನಲ್ಲಿ 2,000 ರನ್ ಹಾಗೂ 100 ವಿಕೆಟ್‌ಗಳನ್ನು ಪಡೆದ ಐವರು ಆಲ್‌ರೌಂಡರ್‌ಗಳ ಪೈಕಿ ಒಬ್ಬರು.

ಗ್ಲೆನ್ ಫಿಲಿಪ್ಸ್ ಪುರುಷರ ಟಿ–20 ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಿದ ನ್ಯೂಝಿಲ್ಯಾಂಡ್‌ನ ನಾಲ್ಕನೇ ಆಟಗಾರರಾಗಲು 71 ರನ್ ಅಗತ್ಯವಿದೆ.


ಪಂದ್ಯ ಆರಂಭದ ಸಮಯ: ರಾತ್ರಿ 7:00

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News