×
Ad

ನಾಳೆ ಮೊದಲ ಟಿ20 ಪಂದ್ಯ | ಭಾರತ-ಶ್ರೀಲಂಕಾ ಸೆಣಸಾಟ

Update: 2024-07-26 22:13 IST

PC : PTI

ಪಲ್ಲೆಕೆಲೆ : ಆತಿಥೇಯ ಶ್ರೀಲಂಕಾ ಹಾಗೂ ಭಾರತ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಶನಿವಾರ ಆರಂಭವಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವ ಹಾಗೂ ನೂತನ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಡಿ ಭಾರತವು ತನ್ನ ಕ್ರಿಕೆಟ್ ಪಯಣದಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ.

2021ರ ನಂತರ ಶ್ರೀಲಂಕಾದಲ್ಲಿ ಸೀಮಿತ ಓವರ್ ಸರಣಿಯನ್ನಾಡಲಿರುವ ಭಾರತವು ಟಿ20 ಹಾಗೂ ಏಕದಿನ ಸರಣಿಯನ್ನು ಎರಡು ವಿಭಿನ್ನ ನಾಯಕರೊಂದಿಗೆ ಆಡಲಿದೆ.

ಎರಡು ಬಾರಿ ವಿಶ್ವಕಪ್ ಜಯಿಸಿರುವ ಗಂಭೀರ್ ಅವರು ರಾಹುಲ್ ದ್ರಾವಿಡ್ರಿಂದ ಕೋಚಿಂಗ್ ಹುದ್ದೆವಹಿಸಿಕೊಂಡಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಸಹಿತ ಪ್ರತಿಯೊಂದು ಐಸಿಸಿ ಟೂರ್ನಿಗಳಲ್ಲಿ ಫೈನಲ್ಗೆ ತಲುಪಿರುವ ಕಾರಣ ನೂತನ ಕೋಚ್ ಗಂಭೀರ್ ಗಮನಾರ್ಹ ಸವಾಲು ಎದುರಿಸುತ್ತಿದ್ದಾರೆ.

ಸೂರ್ಯಕುಮಾರ್ ಹಾಗೂ ಗಂಭೀರ್ 2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದಾಗಲೇ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಗಂಭೀರ್ರೊಂದಿಗೆ ನನ್ನ ಸಂಬಂಧ ವಿಶೇಷ ಹಾಗೂ ಶಕ್ತಿಶಾಲಿಯಾಗಿದೆ ಎಂದು ಸೂರ್ಯ ಬಣ್ಣಿಸಿದ್ದಾರೆ.

ಗಂಭೀರ್ ಅವರ ಕೋಚಿಂಗ್ ಶೈಲಿಯು ಆಟಗಾರರಿಗೆ ಹೊಸ ಅನುಭವ ನೀಡಲಿದ್ದು, ನೂತನ ಟಿ20 ನಾಯಕ ಸೂರ್ಯಕುಮಾರ್ ನಾಯಕತ್ವದೊಂದಿಗೆ ಆಟಗಾರರು ಹೊಂದಿಕೊಳ್ಳುವ ಅಗತ್ಯವಿದೆ.

ನಾಯಕತ್ವದಲ್ಲಿ ಸೀಮಿತ ಅನುಭವ ಹೊಂದಿದ್ದರೂ ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿ ಸೂರ್ಯಕುಮಾರ್ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಿಗೂ ಸ್ವಲ್ಪ ಅಚ್ಚರಿ ತಂದಿದೆ. ಸೂರ್ಯಕುಮಾರ್ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ಆಯ್ಕೆಗೆ ಸದಾ ಲಭ್ಯವಿರುವುದು ಹಾಗೂ ಡ್ರೆಸ್ಸಿಂಗ್ ರೂಮ್ನ ಪ್ರತಿಕ್ರಿಯೆಯನ್ನು ಪರಿಗಣಿಸಿ ಟಿ20 ತಂಡದ ನಾಯಕತ್ವವನ್ನು ಮರು ರಚಿಸಲು ನಿರ್ಧರಿಸಿದೆವು ಎಂದು ಅಗರ್ಕರ್ ಹೇಳಿದ್ದಾರೆ.

ಇತ್ತೀಚೆಗೆ ವಿಶ್ವಕಪ್ ಟ್ರೋಫಿಯನ್ನು ಜಯಿಸಿದ ನಂತರ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದು ತಂಡವು ಸ್ವತಃ ಪರಿವರ್ತನೆಯ ಘಟ್ಟದಲ್ಲಿದೆ. ಟಿ20 ಹಾಗೂ ಏಕದಿನ ಮಾದರಿಯ ಕ್ರಿಕೆಟ್ನ ಉಪ ನಾಯಕನಾಗಿರುವ ಯುವ ಪ್ರತಿಭಾವಂತ ಶುಭಮನ್ ಗಿಲ್ಗೆ ತಂಡದಲ್ಲಿ ತನ್ನ ಸ್ಥಾನ ಗಟ್ಟಿಪಡಿಸಲು ಉತ್ತಮ ಅವಕಾಶ ಲಭಿಸಿದೆ.

ಇತರ ಭರವಸೆಯ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಹಾಗೂ ರಿಯಾನ್ ಪರಾಗ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಬಯಸಿದ್ದಾರೆ.

ಆಡುವ 11ರ ಬಳಗದಲ್ಲಿ ಅಕ್ಷರ್ ಪಟೇಲ್ ಅವರು ಜಡೇಜರ ಸ್ಥಾನ ತುಂಬಲು ಮುಂದಾಗಿದ್ದಾರೆ. ಪಾಂಡ್ಯ, ಶಿವಂ ದುಬೆ ಹಾಗೂ ವಾಶಿಂಗ್ಟನ್ ಸುಂದರ್ ಉಪಸ್ಥಿತಿಯಲ್ಲಿ ಭಾರತದ ಆಲ್ರೌಂಡ್ ಆಯ್ಕೆಗಳು ಸಾಕಷ್ಟಿವೆ.

ಜಸ್ಪ್ರಿತ್ ಬುಮ್ರಾ ಶ್ರೀಲಂಕಾ ಪ್ರವಾಸಕ್ಕೆ ವಿಶ್ರಾಂತಿ ಪಡೆದಿದ್ದು, ಪಲ್ಲೆಕೆಲೆ ಇಂಟರ್ನ್ಯಾಶನಲ್ ಸ್ಟೇಡಿಯಮ್ನ ನೆಚ್ಚಿನ ಪಿಚ್ನಲ್ಲಿ ಅರ್ಷದೀಪ್ ಸಿಂಗ್ ಹಾಗೂ ಮುಹಮ್ಮದ್ ಸಿರಾಜ್ಗೆ ಮಿಂಚಲು ಅವಕಾಶ ಲಭಿಸಿದೆ.

ದುಶ್ಮಂತ ಚಾಮೀರ ಹಾಗೂ ನುವಾನ್ ತುಷಾರ ಅನುಪಸ್ಥಿತಿಯಲ್ಲಿ ಶ್ರೀಲಂಕಾದ ಬೌಲಿಂಗ್ ದಾಳಿಯು ದುರ್ಬಲವಾಗಿದೆ. ಈ ಇಬ್ಬರು ಬೌಲರ್ಗಳು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಚಾಮೀರ ಹಾಗೂ ತುಷಾರ ಸ್ಥಾನಕ್ಕೆ ಅಸಿತ ಫೆರ್ನಾಂಡೊ ಹಾಗೂ ದಿಲ್ಶನ್ ಮದುಶಂಕ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದ 2014ರ ಟಿ20 ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ತಂಡ ಸದ್ಯ ಸವಾಲಿನ ಸಮಯ ಎದುರಿಸುತ್ತಿದೆ. ತಂಡದ ನಿರಾಶಾದಾಯಕ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ವನಿಂದು ಹಸರಂಗ, ಕೋಚ್ ಕ್ರಿಸ್ ಸಿಲ್ವರ್ವುಡ್ ಹಾಗೂ ಸಲಹೆಗಾರ ಮಹೇಲ ಜಯವರ್ಧನೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು.

ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಹಂಗಾಮಿ ಕೋಚ್ ಆಗಿ ನೇಮಕಗೊಂಡಿದ್ದಾರೆ. ಭಾರತೀಯ ತಂಡದಲ್ಲಿ ಅನುಭವಿ ಆಟಗಾರರ ಅನುಪಸ್ಥಿತಿಯ ಲಾಭ ಪಡೆಯುವಂತೆ ಹುರಿದುಂಬಿಸಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಲು ತನ್ನ ತಂಡ ಸ್ಥಿರ ಹಾಗೂ ಬಲಿಷ್ಠ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಜಯಸೂರ್ಯ ಹೇಳಿದ್ದಾರೆ.

ತಂಡವನ್ನು ನಾಯಕನಾಗಿ ಮುನ್ನಡೆಸುವ ಜವಾಬ್ದಾರಿಯು ಭರವಸೆಯ ಬ್ಯಾಟರ್ ಚರಿತ್ ಅಸಲಂಕ ಮೇಲಿದೆ.

ಶ್ರೀಲಂಕಾ ತನ್ನ ತವರು ಪಿಚ್ನಲ್ಲಿ ಆಡುತ್ತಿರುವ ಕಾರಣ ತನ್ನ ಅದೃಷ್ಟ ಬದಲಾಗುವ ಕುರಿತು ಆಶಾವಾದಿಯಾಗಿದೆ. ಲಂಕಾ ತಂಡದಲ್ಲಿ ಮಾಜಿ ನಾಯಕ ದಸುನ್ ಶನಕ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ ಹಾಗೂ ದಿನೇಶ್ ಚಾಂಡಿಮಾಲ್ ಅವರಿದ್ದಾರೆ.

ಪಂದ್ಯ ಆರಂಭದ ಸಮಯ: ಸಂಜೆ 7:00

ಭಾರತ ತಂಡ: ಸೂರ್ಯಕುಮಾರ್ ಯಾದವ್(ನಾಯಕ), ಶುಭಮನ್ ಗಿಲ್(ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮುಹಮ್ಮದ್ ಸಿರಾಜ್.

ಶ್ರೀಲಂಕಾ ತಂಡ: ಚರಿತ್ ಅಸಲಂಕ(ನಾಯಕ), ಪಥುಮ್ ನಿಸ್ಸಾಂಕ, ಕುಶಾಲ್ ಪೆರೇರ(ವಿಕೆಟ್ಕೀಪರ್), ಅವಿಷ್ಕ ಫೆರ್ನಾಂಡೊ, ಕುಶಾಲ್ ಮೆಂಡಿಸ್(ವಿಕೆಟ್ ಕೀಪರ್), ದಿನೇಶ್ ಚಾಂಡಿಮಾಲ್, ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಗೆ, ಮಹೀಶ್ ತೀಕ್ಷಣ, ಚಾಮಿಂಡು ವಿಕ್ರಮಸಿಂಘೆ, ಮಥೀಶ ಪಥಿರನ,ಅಸಿತ ಫೆರ್ನಾಂಡೊ, ದಿಲ್ಶನ್ ಮದುಶಂಕ, ಬಿನುರಾ ಫೆರ್ನಾಂಡೊ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News