×
Ad

ಈ ಬಾರಿ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆಲ್ಲುತ್ತೇವೆ: ಹರ್ಮನ್‌ಪ್ರೀತ್, ಸ್ಮೃತಿ ವಿಶ್ವಾಸ

Update: 2025-08-11 20:40 IST

PC : ICC 

ಮುಂಬೈ, ಆ.11: ಭಾರತ ಕ್ರಿಕೆಟ್ ತಂಡವು ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 2005 ಹಾಗೂ 2017ರಲ್ಲಿ ಎರಡು ಬಾರಿ ಫೈನಲ್‌ ಗೆ ತಲುಪಿದೆ. ಆದರೆ ಎರಡೂ ಬಾರಿಯೂ ಪ್ರಶಸ್ತಿಯಿಂದ ವಂಚಿತವಾಗಿತ್ತು.

ಮಹಿಳೆಯರ ತಂಡವು ಮತ್ತೊಂದು ಐಸಿಸಿ ಸ್ಪರ್ಧೆಗೆ ಸಜ್ಜಾಗಿದ್ದು, ಈ ಬಾರಿಯ ವಿಶ್ವಕಪ್ ಟೂರ್ನಿಯು ಸೆಪ್ಟಂಬರ್ 30ರಿಂದ ಭಾರತದ ನೆಲದಲ್ಲಿ ಆರಂಭವಾಗಲಿದೆ. ‘‘ಈ ಬಾರಿ ನಾವು ಪ್ರಶಸ್ತಿ ಬರ ನೀಗಿಸಿಕೊಳ್ಳುವೆವು’’ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರಿತ್ ಕೌರ್ ವಿಶ್ವಾಸ ವ್ಯಕ್ತಪಡಿಸಿದರು.

‘‘ತವರು ಪ್ರೇಕ್ಷಕರ ಎದುರು ಆಡುವುದು ಯಾವಾಗಲೂ ವಿಶೇಷ. ಈ ಬಾರಿ ನಾವು 100 ಶೇ.ಪ್ರಯತ್ನದೊಂದಿಗೆ ಅಡೆತಡೆಯನ್ನು ಮುರಿದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ದೀರ್ಘ ಸಮಯದಿಂದ ನಿರೀಕ್ಷಿಸುತ್ತಿದ್ದ ವಿಶ್ವಕಪ್‌ ನ್ನು ಗೆಲ್ಲುವೆವು. ವಿಶ್ವಕಪ್ ಯಾವಾಗಲೂ ವಿಶೇಷ. ನಮ್ಮ ದೇಶಕ್ಕಾಗಿ ಏನಾದರೊಂದು ವಿಶೇಷ ಸಾಧನೆ ಮಾಡುವ ಹಂಬಲ ನನಗಿದೆ’’ ಎಂದು 50 ಓವರ್ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರ್ಮನ್‌ ಪ್ರೀತ್ ಹೇಳಿದ್ದಾರೆ.

ಇಂಗ್ಲೆಂಡ್ ತಂಡದ ವಿರುದ್ಧ ಇತ್ತೀಚೆಗೆ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಭಾರತ ತಂಡವು ವಿಶ್ವಕಪ್ ಟೂರ್ನಿಗಿಂತ ಮೊದಲು ಆಸ್ಟ್ರೇಲಿಯ ತಂಡದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

‘‘ಆಸ್ಟ್ರೇಲಿಯದ ವಿರುದ್ಧ ಆಡುವುದು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ನಮ್ಮ ಸ್ಥಿತಿಗತಿಯ ಅರಿವು ನಮಗಿದೆ. ಈ ಸರಣಿಯು ನಮಗೆ ಸಾಕಷ್ಟು ಆತ್ಮವಿಶ್ವಾಸ ನೀಡಲಿದೆ. ನಮ್ಮ ತರಬೇತಿ ಶಿಬಿರದಲ್ಲಿ ನಾವು ಸಾಕಷ್ಟು ಶ್ರಮಪಡುತ್ತೇವೆ. ಫಲಿತಾಂಶಗಳಲ್ಲಿ ಇದು ಕಂಡುಬಂದಿದೆ’’ ಎಂದು ಕೌರ್ ಹೇಳಿದರು.

2005ರ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಭಾರತ ಮಹಿಳಾ ತಂಡವು 2009ರಲ್ಲಿ 3ನೇ ಹಾಗೂ 2013ರಲ್ಲಿ 7ನೇ ಸ್ಥಾನ ಪಡೆದಿತ್ತು. ಆದರೆ 2017ರಲ್ಲಿ ಪ್ರಶಸ್ತಿಯ ಸನಿಹ ತಲುಪಿತ್ತು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಫೈನಲ್‌ ನಲ್ಲಿ ಸೋಲುಂಡಿತ್ತು.

ಇದೇ ಟೂರ್ನಿಯ ಸೆಮಿ ಫೈನಲ್‌ ನಲ್ಲಿ ಆಸ್ಟ್ರೇಲಿಯದ ವಿರುದ್ಧ ಕೌರ್ 171 ರನ್ ಗಳಿಸಿದ್ದರು.ಇದು ನನ್ನ ಶ್ರೇಷ್ಟ ಇನಿಂಗ್ಸ್ ಆಗಿದೆ ಎಂದಿರುವ ಕೌರ್, 2ನೇ ಬಾರಿ ಫೈನಲ್‌ ಗೆ ತಲುಪಿ ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗಲಿದ್ದೇವೆ ಎಂದಿದ್ದಾರೆ.

‘‘ಕ್ರಿಕೆಟ್ ಆಡುತ್ತಿರುವ ಹುಡುಗಿಯರ ಸಂಖ್ಯೆ ಈಗ ಹೆಚ್ಚಾಗಿದೆ. ಇದಕ್ಕೆ ಬಿಸಿಸಿಐ ಕೂಡ ಹೆಚ್ಚಿನ ಮನ್ನಣೆ ನೀಡುತ್ತದೆ. ಮಹಿಳಾ ಕ್ರಿಕೆಟಿಗಾಗಿ ನಡೆಯುತ್ತಿರುವ ಆಂದೋಲನದ ಭಾಗವಾಗುತ್ತಿರುವುದು ನಮ್ಮ ಅದೃಷ್ಟ. ಸ್ವದೇಶದ ಅಭಿಮಾನಿಗಳ ಭಾರೀ ಬೆಂಬಲವು ಈ ವರ್ಷದ ವಿಶ್ವಕಪ್‌ ನಲ್ಲಿ ಭಾರತ ಇತಿಹಾಸ ನಿರ್ಮಿಸಲು ಸ್ಫೂರ್ತಿಯಾಗಲಿದೆ’’ ಎಂದು ಸ್ಮೃತಿ ಮಂಧಾನ ಹೇಳಿದರು.

ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಭಾರತ ಪುರುಷರ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್, ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಉಪಸ್ಥಿತರಿದ್ದರು. ನವೆಂಬರ್ 2ರಂದು ಭಾರತ ತಂಡವು ಟ್ರೋಫಿಯನ್ನು ಗೆಲ್ಲಲಿದೆ ಎಂದು ಎಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News