×
Ad

ನಾಲ್ಕನೇ ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯ ತಂಡದಿಂದ ಕಮಿನ್ಸ್, ಲಿಯೊನ್ ಔಟ್

Update: 2025-12-23 22:40 IST

Photo Credit : NDTV

ಮೆಲ್ಬರ್ನ್, ಡಿ.23: ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯೊನ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹಿರಿಯ ಸ್ಪಿನ್ನರ್ ಲಿಯೊನ್ ಸರ್ಜರಿಗೆ ಒಳಗಾಗಲಿದ್ದು, ಹೆಚ್ಚಿನ ಸಮಯ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ.

ಶುಕ್ರವಾರ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಎಂದೇ ಕರೆಯಲ್ಪಡುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ 15 ಸದಸ್ಯರ ಆಸ್ಟ್ರೇಲಿಯ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ವೇಗದ ಬೌಲರ್ ರಿಚರ್ಡ್‌ಸನ್ ಹಾಗೂ ಸ್ಪಿನ್ನರ್ ಟಾಡ್ ಮರ್ಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯ ತಂಡವು ಪರ್ತ್ ಹಾಗೂ ಬ್ರಿಸ್ಬೇನ್‌ ನಲ್ಲಿ ನಡೆದಿದ್ದ ಮೊದಲೆರಡು ಪಂದ್ಯಗಳನ್ನು 8 ವಿಕೆಟ್‌ಗಳಿಂದ ಹಾಗೂ ಅಡಿಲೇಡ್‌ನಲ್ಲಿ ನಡೆದಿರುವ ಮೂರನೇ ಪಂದ್ಯವನ್ನು 82 ರನ್‌ಗಳ ಅಂತರದಿಂದ ಗೆದ್ದುಕೊಂಡು ಈಗಾಗಲೆ ಆ್ಯಶಸ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ.

‘ಪ್ಯಾಟ್ ಕಮಿನ್ಸ್ ಅವರು ತನ್ನ ಯೋಜನೆಯ ಭಾಗವಾಗಿ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ನಾಥನ್ ಲಿಯೊನ್ ಬಲ ಮಂಡಿರಜ್ಜುವಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಸುದೀರ್ಘ ಅವಧಿ ಕ್ರಿಕೆಟ್‌ ನಿಂದ ದೂರ ಉಳಿಯಲಿದ್ದಾರೆ’ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಮಿನ್ಸ್ ಜುಲೈ ನಂತರ ಮೊದಲ ಬಾರಿ ಅಡಿಲೇಡ್ ಟೆಸ್ಟ್‌ನಲ್ಲಿ ಆಡಿದ್ದರು. ಒಟ್ಟು 6 ವಿಕೆಟ್‌ ಗಳನ್ನು ಪಡೆದು ಮಿಂಚಿದ್ದರು.

38ರ ವಯಸ್ಸಿನ ಲಿಯೊನ್ ಅವರು ಅಡಿಲೇಡ್ ಟೆಸ್ಟ್‌ನ ಐದನೇ ದಿನದಾಟದಲ್ಲಿ ನಾಲ್ಕು ರನ್ ಉಳಿಸುವ ಯತ್ನದಲ್ಲಿದ್ದಾಗ ಬಲಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಅಡಿಲೇಡ್‌ ನಲ್ಲಿ ಲಿಯೊನ್ ಅವರು ತನ್ನ 564ನೇ ವಿಕೆಟ್ ಪಡೆದಿದ್ದು ತಮ್ಮದೇ ದೇಶದ ದಿಗ್ಗಜ ಬೌಲರ್ ಗ್ಲೆನ್ ಮೆಕ್‌ಗ್ರಾತ್‌ರನ್ನು ಹಿಂದಿಕ್ಕಿ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡದ ನಾಯಕತ್ವವಹಿಸಿದ್ದರು. ಅಡಿಲೇಡ್ ಟೆಸ್ಟ್‌ನಿಂದ ಕೊನೆಯ ಕ್ಷಣದಲ್ಲಿ ಹೊರಗುಳಿದಿದ್ದ ಸ್ಮಿತ್ ಮೆಲ್ಬರ್ನ್‌ನಲ್ಲಿ ಮತ್ತೊಮ್ಮೆ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಮರ್ಫಿ ಅವರು ತನ್ನ ತವರಿನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಎಲ್ಲ ಏಳು ಪಂದ್ಯಗಳನ್ನು ವಿದೇಶಿ ನೆಲದಲ್ಲಿ ಆಡಿದ್ದರು. ಈ ವರ್ಷಾರಂಭದಲ್ಲಿ ಶ್ರೀಲಂಕಾದಲ್ಲಿ ಆಸ್ಟ್ರೇಲಿಯ ತಂಡದ ಪರ ಕೊನೆಯ ಪಂದ್ಯ ಆಡಿದ್ದರು.

ರಿಚರ್ಡ್‌ಸನ್ ನಾಲ್ಕು ವರ್ಷಗಳ ಅಂತರದ ನಂತರ ಆಸ್ಟ್ರೇಲಿಯ ತಂಡಕ್ಕೆ ಸೇರಿದ್ದಾರೆ. ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಸ್ಕಾಟ್ ಬೋಲ್ಯಾಂಡ್ ಹಾಗೂ ಮಿಚೆಲ್ ಸ್ಟಾರ್ಕ್ ಮತ್ತೊಮ್ಮೆ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಮೈಕಲ್ ನೆಸರ್, ಬ್ರೆಂಡನ್ ಡಾಗೆಟ್ ಹಾಗೂ ರಿಚರ್ಡ್‌ಸನ್ ಈ ಇಬ್ಬರಿಗೆ ಸಾಥ್ ನೀಡಲಿದ್ದಾರೆ.

*ಆಸ್ಟ್ರೇಲಿಯ ತಂಡ: ಸ್ಟೀವ್ ಸ್ಮಿತ್(ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕಲ್ ನೆಸರ್, ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News