ನಾಲ್ಕನೇ ಆ್ಯಶಸ್ ಟೆಸ್ಟ್ | ಕೊನೆಗೂ ಆಸ್ಟ್ರೇಲಿಯಕ್ಕೆ ಸೋಲುಣಿಸಿದ ಇಂಗ್ಲೆಂಡ್; 15 ವರ್ಷಗಳ ಕಾಯುವಿಕೆ ಅಂತ್ಯ!
Photo Credit : PTI
ಮೆಲ್ಬರ್ನ್, ಡಿ.27: ಕ್ಲೀನ್ ಸ್ವೀಪ್ ಭೀತಿಯಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡವು ಕೊನೆಗೂ ಮರು ಹೋರಾಟದ ಹಾದಿ ಕಂಡುಕೊಂಡಿದ್ದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ಶನಿವಾರ ಕೊನೆಗೊಂಡ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಯಿತು. ಈ ಮೂಲಕ ಆಸ್ಟ್ರೇಲಿಯ ನೆಲದಲ್ಲಿ 15 ವರ್ಷಗಳ ನಂತರ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿದೆ.
ಈ ಪಂದ್ಯವು ಎರಡೇ ದಿನದೊಳಗೆ ಅಂತ್ಯಗೊಂಡಿದ್ದು, ಈ ಗೆಲುವಿನ ಮೂಲಕ ಪ್ರವಾಸಿ ತಂಡವು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ.
ಮೊದಲ ದಿನದಾಟವಾದ ಶುಕ್ರವಾರ 20 ವಿಕೆಟ್‌ಗಳು ಪತನಗೊಂಡಿದ್ದವು. ಎರಡನೇ ದಿನದಾಟವಾದ ಶನಿವಾರ 92,045 ಪ್ರೇಕ್ಷಕರ ಸಮ್ಮುಖದಲ್ಲಿ ಭೋಜನ ವಿರಾಮದ ನಂತರ ಆಸ್ಟ್ರೇಲಿಯ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ ಕೇವಲ 132 ರನ್‌ಗೆ ನಿಯಂತ್ರಿಸಿದ ಇಂಗ್ಲೆಂಡ್ ತಂಡವು ಗೆಲುವಿಗೆ 175 ರನ್ ಗುರಿ ಪಡೆಯಿತು. ಇಂಗ್ಲೆಂಡ್ ತಂಡವು ರನ್ ಚೇಸ್ ವೇಳೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ ಹ್ಯಾರಿ ಬ್ರೂಕ್(ಔಟಾಗದೆ 18)ಹಾಗೂ ಜಮೀ ಸ್ಮಿತ್(ಔಟಾಗದೆ 3) ನೆರವಿನಿಂದ ಗೆಲುವಿನ ನಗೆ ಬೀರಿತು. ಜೇಕಬ್ ಬೆಥೆಲ್ 40 ರನ್ ಹಾಗೂ ಝ್ಯಿಕ್ ಕ್ರಾಲಿ 37 ರನ್ ಕಲೆ ಹಾಕಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
ಮೊದಲ ಮೂರು ಟೆಸ್ಟ್ ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್ ತಂಡವು ಭಾರೀ ಒತ್ತಡದೊಂದಿಗೆ ಮೆಲ್ಬರ್ನ್‌ಗೆ ಆಗಮಿಸಿತ್ತು. ಅಂತಿಮವಾಗಿ ಗೆಲುವಿನ ಮುಖ ಕಂಡಿರುವ ಆಂಗ್ಲರು ಭಾರೀ ಆತ್ಮವಿಶ್ವಾಸದೊಂದಿಗೆ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಸಿಡ್ನಿಗೆ ಪ್ರಯಾಣಿಸಲಿದೆ.
ಇಂಗ್ಲೆಂಡ್ ತಂಡವು 2011ರ ಜನವರಿಯ ನಂತರ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದೆ. 2011ರಲ್ಲಿ ಸಿಡ್ನಿಯಲ್ಲಿ ಕೊನೆಯ ಬಾರಿ ಜಯ ಗಳಿಸಿತ್ತು. ಆ ನಂತರ ಆಸ್ಟ್ರೇಲಿಯದಲ್ಲಿ 18 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ತಂಡವು 16 ಸೋಲು ಹಾಗೂ 2 ಡ್ರಾ ಸಾಧಿಸಿ ಗೆಲುವಿನ ಬರ ಎದುರಿಸುತ್ತಿತ್ತು.
ಜೋ ರೂಟ್ ಅವರು ಆಸ್ಟ್ರೇಲಿಯದಲ್ಲಿ ಆಡಿರುವ 18 ಟೆಸ್ಟ್ ಪಂದ್ಯಗಳಲ್ಲಿ ಚೊಚ್ಚಲ ಗೆಲುವು ದಾಖಲಿಸಿದರು. 13 ಪಂದ್ಯಗಳನ್ನಾಡಿರುವ ನಾಯಕ ಬೆನ್ ಸ್ಟೋಕ್ಸ್ ಗೆ ಕೂಡ ಇದು ಮೊದಲ ಗೆಲುವಿನ ಅನುಭವ. ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್‌ಗೆ ಮೊರೆ ಹೋದ ಆರಂಭಿಕ ಆಟಗಾರರಾದ ಕ್ರಾಲಿ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್‌ನಲ್ಲಿ ಕ್ಷಿಪ್ರವಾಗಿ 50 ರನ್ ಕಲೆ ಹಾಕಿದರು. ಡಕೆಟ್(34 ರನ್)ವಿಕೆಟನ್ನು ಉರುಳಿಸಿದ ಸ್ಟಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು. ವೇಗದ ಬೌಲರ್ ಬ್ರೆಂಡನ್ ಕಾರ್ಸ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಇಂಗ್ಲೆಂಡ್‌ನ ಈ ಪ್ರಯೋಗ ತಿರುಗುಬಾಣವಾಯಿತು. ಕೇವಲ 8 ಎಸೆತಗಳನ್ನು ಎದುರಿಸಿ 6 ರನ್ ಗಳಿಸಿದ ಕಾರ್ಸ್ ಅವರು ರಿಚರ್ಡ್‌ಸನ್‌ಗೆ ವಿಕೆಟ್ ಒಪ್ಪಿಸಿದರು.
ಕ್ರಾಲಿ ಹಾಗೂ ಬೆಥೆಲ್ ಅವರು ಸ್ಕಾಟ್ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದರು. ರಿಚರ್ಡ್‌ಸನ್ ಅವರು ಜೋ ರೂಟ್‌ರನ್ನು(15 ರನ್) ಎಲ್ಬಿಡಬ್ಲು ಬಲೆಗೆ ಬೀಳಿಸಿದರೆ, ಸ್ಟಾರ್ಕ್ ಅವರು ಬೆನ್ ಸ್ಟೋಕ್ಸ್(2 ರನ್)ವಿಕೆಟ್ ಉರುಳಿಸಿದರು. ಗೆಲುವಿಗೆ ಕೇವಲ 10 ರನ್ ಅಗತ್ಯವಿದ್ದಾಗ ಬ್ರೂಕ್ ಹಾಗೂ ಸ್ಮಿತ್ ತಂಡವನ್ನು ಆಧರಿಸಿದರು.
ಮೊದಲ ದಿನದಾಟವು 20 ವಿಕೆಟ್ ಗಳ ಪತನಕ್ಕೆ ಸಾಕ್ಷಿಯಾದ ನಂತರ ಆಸ್ಟ್ರೇಲಿಯ ತಂಡವು ವಿಕೆಟ್ ನಷ್ಟವಿಲ್ಲದೆ 4 ರನ್‌ನಿಂದ ತನ್ನ ಎರಡನೇ ಇನಿಂಗ್ಸ್ ಆರಂಭಿಸಿತು. 1909ರ ನಂತರ ಆ್ಯಶಸ್ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಗರಿಷ್ಠ ವಿಕೆಟ್‌ಗಳು ಪತನಗೊಂಡಿವೆ. ನೈಟ್‌ವಾಚ್‌ಮ್ಯಾನ್ ಬೋಲ್ಯಾಂಡ್(6 ರನ್) ನಿನ್ನೆಯ ಮೊತ್ತಕ್ಕೆ ಎರಡು ರನ್ ಸೇರಿಸಿ ಅಟ್ಕಿನ್ಸನ್ ಬೌಲಿಂಗ್‌ನಲ್ಲಿ ಔಟಾದರು.
ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯದ ಕೊನೆಯ 2 ವಿಕೆಟ್‌ಗಳನ್ನು ಉರುಳಿಸಿದ್ದ ಜೋಶ್ ಟೊಂಗ್ ಹ್ಯಾಟ್ರಿಕ್ ಕನಸಿನೊಂದಿಗೆ ಬೌಲಿಂಗ್ ದಾಳಿ ಮುಂದುವರಿಸಿದರು. ಜೇಕ್ ವೆದರಾಲ್ಡ್ (3 ರನ್) ಹ್ಯಾಟ್ರಿಕ್ ನಿರಾಕರಿಸಿದರು.
ಕಾರ್ಸ್‌ಗೆ ವಿಕೆಟ್ ಒಪ್ಪಿಸುವ ಮೊದಲು ಟ್ರಾವಿಸ್ ಹೆಡ್ 46 ರನ್ ಕಲೆ ಹಾಕಿದರು. ಉಸ್ಮಾನ್ ಖ್ವಾಜಾ(0)ಹಾಗೂ ಅಲೆಕ್ಸ್ ಕ್ಯಾರಿ(4 ರನ್)9 ಎಸೆತಗಳಲ್ಲಿ ಔಟಾದಾಗ ಇಂಗ್ಲೆಂಡ್ ಪುಟಿದೆದ್ದಿತು.
ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯ 6 ವಿಕೆಟ್ ಗಳ ನಷ್ಟಕ್ಕೆ 98 ರನ್ ಗಳಿಸಿತ್ತು. ಗ್ರೀನ್(19 ರನ್) ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯ ತಂಡದ ಸ್ಕೋರ್ 119ಕ್ಕೆ ತಲುಪಿತು. ನೆಸೆರ್ ಹಾಗೂ ಸ್ಟಾರ್ಕ್ ಒಂದೂ ರನ್ ಗಳಿಸದೆ ಕಾರ್ಸ್‌ಗೆ ವಿಕೆಟ್ ಒಪ್ಪಿಸಿದರು. 13 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯ ತಂಡವು ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ನಾಯಕ ಸ್ಟೀವನ್ ಸ್ಮಿತ್ ಔಟಾಗದೆ 24 ರನ್ ಗಳಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್(5-45)ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್(2-44)ಪಡೆದಿರುವ ಜೋಶ್ ಟೊಂಗ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 152 ರನ್
ಇಂಗ್ಲೆಂಡ್ ಮೊದಲ ಇನಿಂಗ್ಸ್: 110 ರನ್
ಆಸ್ಟ್ರೇಲಿಯ ಎರಡನೇ ಇನಿಂಗ್ಸ್: 132 ರನ್
(ಟ್ರಾವಿಸ್ ಹೆಡ್ 46, ಸ್ಟೀವನ್ ಸ್ಮಿತ್ ಔಟಾಗದೆ 24, ಬ್ರೆಂಡನ್ ಕಾರ್ಸ್ 4-34, ಬೆನ್ ಸ್ಟೋಕ್ಸ್ 3-24, ಟೊಂಗ್ 2-44)
ಇಂಗ್ಲೆಂಡ್ ಎರಡನೇ ಇನಿಂಗ್ಸ್: 178/6
(ಜೇಕಬ್ ಬೆಥೆಲ್ 40, ಝ್ಯಕ್ ಕ್ರಾಲಿ 37, ಡಕೆಟ್ 34, ಬ್ರೂಕ್ ಔಟಾಗದೆ 18, ರಿಚರ್ಡ್‌ಸನ್ 2-22, ಸ್ಕಾಟ್ ಬೋಲ್ಯಾಂಡ್ 2-29, ಮಿಚೆಲ್ ಸ್ಟಾರ್ಕ್ 2-55)
ಪಂದ್ಯಶ್ರೇಷ್ಠ: ಜೋಶ್ ಟೊಂಗ್.